ಗೃಹ ಸಚಿವಾಲಯದಿಂದ ಇನ್ಫೋಸಿಸ್ ಫೌಂಡೇಶನ್ ನೋಂದಣಿ ರದ್ದು

ನವದೆಹಲಿ: ಮಾಹಿತಿ ತಂತ್ರಜ್ಞಾನ ದಿಗ್ಗಜ ಸಂಸ್ಥೆ ಇನ್ಫೋಸಿಸ್‍ನ ಸರ್ಕಾರೇತರ ಸಂಸ್ಥೆಯಾದ ಇನ್ಫೋಸಿಸ್ ಫೌಂಡೇಶನ್ ನೋಂದಣಿಯನ್ನು ಕೇಂದ್ರ ಗೃಹ ಸಚಿವಾಲಯ ರದ್ದುಗೊಳಿಸಿದೆ.

ವಿದೇಶದಿಂದ ದೇಣಿಗೆ ಪಡೆಯುವ ವಿಚಾರದಲ್ಲಿ ಸಂಸ್ಥೆ ವಿದೇಶಿ ದೇಣಿಗೆ ನಿಯಂತ್ರಣಾ ಕಾಯ್ದೆ(ಎಫ್‌ಸಿಆರ್‌ಎ) ನಿಯಮಗಳನ್ನು ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕಠಿಣ ಕ್ರಮಕೈಗೊಂಡಿದೆ ಎಂದು ವರದಿಯಾಗಿದೆ.

ವಿದೇಶದಿಂದ ದೇಣಿಗೆ ಸ್ವೀಕರಿಸುತ್ತಿರುವ ದೇಶದ ಎಲ್ಲಾ ಎನ್‍ಜಿಒಗಳು ಎಫ್‌ಸಿಆರ್‌ಎ ಅಡಿ ನೋಂದಣಿ ಮಾಡಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ.

ಇನ್ಫೋಸಿಸ್ ಫೌಂಡೇಶನ್ 6 ವರ್ಷದ ಹಿಂದಿನ ವಾರ್ಷಿಕ ಲೆಕ್ಕಪತ್ರಗಳನ್ನು ಸಲ್ಲಿಸದ ಕಾರಣ ಗೃಹ ಇಲಾಖೆ ಕಳೆದ ವರ್ಷವೇ ಶೋಕಾಸ್ ನೋಟಿಸ್ ಕಳುಹಿಸಿತ್ತು. ಆದರೆ ಸಂಸ್ಥೆ ಸೂಕ್ತ ದಾಖಲೆಗಳನ್ನು ನೀಡಲು ವಿಫಲವಾದ ಹಿನ್ನೆಲೆಯಲ್ಲಿ ಈಗ ಕ್ರಮಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿಯಮಗಳ ಅನ್ವಯ ಯಾವುದೇ ಸಂಸ್ಥೆ ವಿದೇಶಿ ದೇಣಿಗೆ ಪಡೆಯದಿದ್ದರೂ ಕೂಡ ಈ ಕುರಿತು ಮಾಹಿತಿ ನೀಡಬೇಕಿದೆ. ಇನ್ಫೋಸಿಸ್ ಮಾತ್ರವಲ್ಲದೇ ದೇಶದ ಸುಮಾರು 1,755 ಎನ್‍ಜಿಒಗಳಿಗೆ ಕೇಂದ್ರ ಸಚಿವಾಲಯ ಕಳೆದ ವರ್ಷ ನೋಟಿಸ್ ಜಾರಿ ಮಾಡಿತ್ತು.

ಎಫ್‌ಸಿಆರ್‌ಎ ಮಾರ್ಗದರ್ಶಿ ಸೂತ್ರದ ಪ್ರಕಾರ, ಎನ್‍ಜಿಒ ಸಂಸ್ಥೆ ವಾರ್ಷಿಕ ಲೆಕ್ಕಪತ್ರವನ್ನು ಆನ್‍ಲೈನ್ ಮೂಲಕ ಸಲ್ಲಿಸಬೇಕಾಗುತ್ತದೆ. ಖರ್ಚುಗಳ ವಿವರ ಮತ್ತು ಆದಾಯದ ಮಾಹಿತಿಯನ್ನು ಸ್ಕ್ಯಾನ್ ಮಾಡಿ ಹಣಕಾಸು ವರ್ಷ ಆರಂಭಗೊಂಡ 9 ತಿಂಗಳ ಒಳಗಡೆ ಸಲ್ಲಿಸಬೇಕಾಗುತ್ತದೆ. ಒಂದು ವೇಳೆ ಕಂಪನಿ ಆ ವರ್ಷದಲ್ಲಿ ವಿದೇಶದಿಂದ ದೇಣಿಗೆ ಸ್ವೀಕರಿಸದೇ ಇದ್ದಲ್ಲಿ ಆ ವರ್ಷ ದೇಣಿಗೆ ಸ್ವೀಕರಿಸಿಲ್ಲ ಎಂಬುದನ್ನು ಉಲ್ಲೇಖಿಸಬೇಕಾಗುತ್ತದೆ.

ಈ ವಿಚಾರದ ಬಗ್ಗೆ ಇನ್ಫೋಸಿಸ್ ಫೌಂಡೇಶನ್ ವಕ್ತಾರರನ್ನು ಸಂಪರ್ಕಿಸಿದಾಗ, ನಮ್ಮ ಸಂಸ್ಥೆ ಎಫ್‌ಸಿಆರ್‌ಎ ಕಾಯ್ದೆಯ ಅಡಿ ಬರುವುದಿಲ್ಲ ಎಂದಿದ್ದಾರೆ.

1966 ರಲ್ಲಿ ಸ್ಥಾಪನೆಯಾಗಿರುವ ಈ ಸಂಸ್ಥೆಗೆ ಸುಧಾಮೂರ್ತಿಯವರು ಮುಖ್ಯಸ್ಥೆಯಾಗಿದ್ದು, ಭಾರತ ಹಳ್ಳಿಗಳ ಅಭಿವೃದ್ಧಿ, ಆರೋಗ್ಯ, ಕಲೆ, ಸಾಹಿತ್ಯಕ್ಕೆ ಪ್ರೋತ್ಸಾಹ ನೀಡುವುದು ಇನ್ಫೋಸಿಸ್ ಫೌಂಡೇಶನ್ ಪ್ರಮುಖ ಕಾರ್ಯವಾಗಿದೆ.

Comments

Leave a Reply

Your email address will not be published. Required fields are marked *