ರಂಜಾನ್ ಉಪವಾಸವನ್ನು ತೊರೆದು ಮುಸ್ಲಿಂ ಯುವಕನಿಂದ ಹಿಂದೂ ಯುವಕನಿಗೆ ರಕ್ತದಾನ

ದಿಸ್‍ಪುರ್: ರಂಜಾನ್ ಹಬ್ಬದ ಪ್ರಯುಕ್ತ ಉಪವಾಸವಿದ್ದರೂ ಅಸ್ಸಾಂನಲ್ಲಿ ಮುಸ್ಲಿಂ ಯುವಕರೊಬ್ಬರು ಹಿಂದೂ ಯುವಕನಿಗೆ ರಕ್ತದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಅಸ್ಸಾಂ ಮಂಗಲ್‍ದೈನ ನಿವಾಸಿ ಪನ್‍ಹುಲ್ಲಾ ಅಹ್ಮದ್ ರಂಜಾನ್ ಉಪವಾಸ ಮುರಿದು ರಕ್ತದಾನ ಮಾಡಿದ್ದಾರೆ. ಸ್ವಾಗತ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಅಹ್ಮದ್ ಅವರಲ್ಲಿ ಸಹೋದ್ಯೋಗಿ ತಪಾಶ್ ಭಗವತಿ ಕರೆ ಮಾಡಿ ಒಬ್ಬ ರೋಗಿಗೆ ತುರ್ತು ರಕ್ತ ಬೇಕು ಎಂದು ಕೇಳಿದ್ದಾರೆ. ಈ ಮನವಿಗೆ ಸ್ಪಂದಿಸಿ ಅಹ್ಮದ್ ರಕ್ತದಾನ ಮಾಡಿದ್ದಾರೆ.

ನಡೆದಿದ್ದು ಏನು?
ಅಸ್ಸಾಂನ ದೇಮಾಜಿ ಜಿಲ್ಲೆಯ ಯುವಕ ರಂಜನ್ ಗೂಗೋಯ್ ಅಪೊಲೋ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕಿತ್ತು. ರಂಜನ್ ದೇಹದಲ್ಲಿ ರಕ್ತ ಕಡಿಮೆ ಇದ್ದ ಕಾರಣ ರಕ್ತದಾನ ಮಾಡುವವರ ಅವಶ್ಯಕತೆ ಇತ್ತು. ರಂಜನ್ ಮನೆಯವರು ತುಂಬಾ ಜನರನ್ನು ರಕ್ತದಾನ ಮಾಡುವಂತೆ ಸಂಪರ್ಕಿಸಿದ್ದಾರೆ. ಅದರೆ ಆ ಸಮಯದಲ್ಲಿ ದಾನಿಗಳು ಸಿಕ್ಕಿರಲಿಲ್ಲ.

ಈ ವೇಳೆ ಸಹೋದ್ಯೋಗಿ ಭಗವತಿ ಕರೆಗೆ ಸ್ಪಂದಿಸಿದ ಅಹ್ಮದ್ ರಕ್ತದಾನ ಮಾಡಲು ಒಪ್ಪಿಕೊಂಡಿದ್ದಾರೆ. ಉಪವಾಸ ಇರುವ ಈ ಸಮಯದಲ್ಲಿ ರಕ್ತ ನೀಡಿದರೆ ಆರೋಗ್ಯಕ್ಕೆ ತೊಂದರೆಯಾಗಬಹುದು ಎಂದು ವೈದ್ಯರು ಎಚ್ಚರಿಕೆ ನೀಡಿದ್ದರೂ ಧರ್ಮದ ಆಚರಣೆಯನ್ನು ಮುರಿದು ಊಟ ಸೇವಿಸಿ ಅಹ್ಮದ್ ರಕ್ತದಾನ ಮಾಡಿ ಮಾನವೀಯತೆ ತೋರಿಸಿದ್ದಾರೆ.

ಟೀಂ ಹ್ಯುಮಾನಿಟಿ ಪೇಜ್ ಸ್ನೇಹಿತರಾದ ಅಹ್ಮದ್ ಮತ್ತು ತಪಾಶ್ ಭಗವತಿ ಅವರ ಫೋಟೋವನ್ನು ಕಳುಹಿಸಿ ಈ ಸುದ್ದಿಯನ್ನು ಪ್ರಕಟಿಸಿದೆ. ಇವರಿಬ್ಬರು ನಿರಂತರ ರಕ್ತದಾನ ಮಾಡುತ್ತಿರುತ್ತಾರೆ ಎಂದು ಪೋಸ್ಟ್ ಹಾಕಿದೆ.

Comments

Leave a Reply

Your email address will not be published. Required fields are marked *