ಮೈತ್ರಿ ಸರ್ಕಾರಕ್ಕೆ ಜನರು ಇಚ್ಛಾ ಮರಣದ ವರ ಕೊಟ್ಟಿದ್ದಾರೆ: ಅನಂತ್‍ಕುಮಾರ್ ಹೆಗ್ಡೆ

ಕಾರವಾರ: ರಾಜ್ಯದ ಜನರು ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರಕ್ಕೆ ಇಚ್ಛಾ ಮರಣದ ವರವನ್ನು ಕೊಟ್ಟಿದ್ದಾರೆ. ಯಾವತ್ತು ಅವರ ಕಲಹ, ಭಿನ್ನಾಭಿಪ್ರಾಯ ಹೆಚ್ಚಾಗುತ್ತದೆಯೋ ಅಂದು ಸರ್ಕಾರ ಬೀಳುತ್ತದೆ ಎಂದು ಕೇಂದ್ರ ಸಚಿವ ಅನಂತ್‍ಕುಮಾರ್ ಹೆಗ್ಡೆ ಹೇಳಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದ ಕಾರ್ಯಕರ್ತರಿಗೆ ಅಭಿನಂದನಾ ಸಭೆಯಲ್ಲಿ ಮಾತನಾಡಿದ ಕೇಂದ್ರ ಸಚಿವರು, ಸರ್ಕಾರ ಬೀಳಿಸಲು ಬೇರೆ ಯಾರ ಪ್ರಯತ್ನವೂ ಬೇಡ. ಅದು ಇಚ್ಛಾ ಮರಣ ವರ ಪಡೆದುಕೊಂಡು ಹೊರಟಿದೆ. ಅದಕ್ಕೆ ಯಾವ ದಿನಾಂಕ ನಿಗದಿ ಮಾಡುವುದು ಬೇಡ. ದೋಸ್ತಿ ನಾಯಕರೇ ನಿರ್ಧರಿಸುವ ದಿನವೇ ಸರ್ಕಾರ ತಾನಾಗಿಯೇ ಬೀಳುತ್ತದೆ ಎಂದು ಲೇವಡಿ ಮಾಡಿದರು.

ಬಿಜೆಪಿಯು ರಾಜ್ಯದಲ್ಲಿ ಈ ಬಾರಿ 22ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ. ಕೇಂದ್ರದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತೆ, ನರೇಂದ್ರ ಮೋದಿ ಅವರು ಪ್ರಧಾನಿಯಾಗುತ್ತಾರೆ ಎಂದು ತಿಳಿಸಿದರು.

ಶಿರಸಿಯಲ್ಲಿ ಏಪ್ರಿಲ್ 23ರಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚ ಉಪಾಧ್ಯಕ್ಷ ಅನಿಶ್ ಮೇಲೆ ಎಸ್‍ಡಿಪಿಐ ಕಾರ್ಯಕರ್ತರು ಮಾರಣಾಂತಿಕ ಹಲ್ಲೆ ಮಾಡಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವರು, ಇದೊಂದು ಎಸ್‍ಡಿಪಿಐಯ ದೊಡ್ಡ ವಿಕೃತಿಯಾಗಿದೆ. ಎಲ್ಲೆಲ್ಲಿ ಎಸ್‍ಡಿಪಿಐ ಬೆಳೆದಿದೆಯೋ ಅಲ್ಲಲ್ಲಿ ಗೊಂದಲ ಕೋಮು ದ್ವೇಷ ಬೆಳೆಸುತ್ತಿದೆ. ಉತ್ತರ ಕನ್ನಡ ಜಿಲ್ಲೆಗೂ ಕಾಲಿಟ್ಟಿದ್ದು ಸಾರ್ವಜನಿಕರು ಈ ಬಗ್ಗೆ ಜಾಗೃತವಾಗಿರಬೇಕು ಎಂದರು.

ಎಸ್‍ಡಿಪಿಐ ಮುಸ್ಲಿಂ ಸಮುದಾಯವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ಮೊದಲು ತನ್ನ ಸಮುದಾಯದವರ ಮೇಲೆಯೇ ಹಲ್ಲೆ ಮಾಡಿದೆ. ಇದು ಅಪಾಯಕಾರಿ ಬೆಳವಣಿಗೆ ಎಂದು ಕಿಡಿ ಕಾರಿದರು.

Comments

Leave a Reply

Your email address will not be published. Required fields are marked *