ಬಾಲಾಕೋಟ್ ಪ್ರೇರಣೆ – ಈಗ ಕಟ್ಟಡವನ್ನೇ ಉಡೀಸ್ ಮಾಡೋ ಬಾಂಬ್ ಖರೀದಿಗೆ ಮುಂದಾದ ಭಾರತ

ನವದೆಹಲಿ: ಪಾಕಿಸ್ತಾನದ ಬಾಲಕೋಟ್ ಮೇಲಿನ ಏರ್ ಸ್ಟ್ರೈಕ್‍ನಿಂದ ಉತ್ತೇಜನಗೊಂಡಿರುವ ಭಾರತ ಈಗ ಕಟ್ಟಡವನ್ನೇ ಸಂಪೂರ್ಣವಾಗಿ ಧ್ವಂಸಗೊಳಿಸುವ ಸಾಮರ್ಥ್ಯ ಹೊಂದಿರುವ ಬಾಂಬ್ ಖರೀದಿಸಲು ಮುಂದಾಗಿದೆ.

ಹೌದು. ಬಾಲಾಕೋಟ್ ದಾಳಿ ವೇಳೆ ಭಾರತ ಇಸ್ರೇಲ್ ನಿರ್ಮಿತ ಸ್ಪೈಸ್-2000 ಬಾಂಬ್ ಬಳಸಿತ್ತು. ಈಗ ಸರ್ಕಾರ ಈ ಬಾಂಬ್‍ಗಿಂತ ಶಕ್ತಿಶಾಲಿಯಾಗಿರುವ ಮಾರ್ಕ್ 84 ಖರೀದಿಸಲು ಮುಂದಾಗಿದೆ ಎಂದು ವಾಯು ಸೇನೆಯಯ ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಪ್ರಕಟಿಸಿದೆ.

ಬಾಲಾಕೋಟ್ ದಾಳಿ ವೇಳೆ ಮಿರಾಜ್ ಯುದ್ಧ ವಿಮಾನದ ಮೂಲಕ ಉಗ್ರರ ಶಿಬಿರದ ಮೇಲೆ ಸ್ಪೈಸ್ -2000 ಬಾಂಬ್ ಹಾಕಲಾಗಿತ್ತು. ಈ ಬಾಂಬ್ ಗಳು ಮೇಲಿನಿಂದ ಸಿಮೆಂಟ್ ಶೀಟ್ ಗಳನ್ನು ತೂತು ಮಾಡಿ ಕೆಳಗಡೆ ಬಿದ್ದ ಬಳಿಕ ಸ್ಫೋಟಗೊಂಡಿತ್ತು. ಈ 70-80 ಕೆಜಿ ಸ್ಫೋಟಕಗಳನ್ನು ಹೊಂದಿರುವ ಈ ಬಾಂಬ್‍ಗಳು ಸ್ಫೋಟಗೊಳ್ಳುತ್ತದೆ ಹೊರತು ಸಂಪೂರ್ಣ ಕಟ್ಟಡವನ್ನು ಧ್ವಂಸಗೊಳಿಸುವ ಸಾಮಥ್ರ್ಯವನ್ನು ಹೊಂದಿಲ್ಲ.

ಈಗ ಭಾರತದ ವಾಯುಸೇನೆ ಬಂಕರ್ ಮತ್ತು ಕಟ್ಟಡಗಳನ್ನು ಧ್ವಂಸಗೊಳಿಸಬಲ್ಲ ಮಾರ್ಕ್ 84 ಬಾಂಬ್ ಗಳನ್ನು ಖರೀದಿಸಲು ಮುಂದಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಈ ಬಾಂಬ್ ಗಳು ಬಂಕರ್ ಬಸ್ಟರ್ ಎಂದೇ ಪ್ರಸಿದ್ಧಿ ಪಡೆದಿದ್ದು, ಶತ್ರುಪಾಳಯದ ಬಂಕರ್‍ಗಳು ಎಷ್ಟೇ ಸುರಕ್ಷಿತವಾಗಿದ್ದರೂ ಛಿದ್ರಗೊಳಿಸುತ್ತವೆ. ಗುರಿ ನಿಗದಿ ಪಡಿಸಿ ಉಡಾವಣೆ ಮಾಡಿದರೆ ಸಾಕು ಗುರಿ ತಪ್ಪುವುದಿಲ್ಲ. ಎಂತಹುದೇ ಪರಿಸ್ಥಿತಿಯಲ್ಲೂ ಗುರಿಯನ್ನು ನಿಖರವಾಗಿ ಭೇದಿಸುತ್ತದೆ.

ಕೇಂದ್ರ ಸರ್ಕಾರ ಮೂರು ಸೇನೆಗಳಿಗೆ ಗರಿಷ್ಠ 300 ಕೋಟಿ ರೂ. ವರೆಗಿನ ಸಲಕರಣೆಗಳನ್ನು ಖರೀದಿಸಲು ಅನುಮತಿ ನೀಡಿದೆ. ಈ ತುರ್ತು ವಿಶೇಷ ಅಧಿಕಾರದ ಅಡಿಯಲ್ಲಿ ವಾಯುಸೇನೆ ಈ ಬಾಂಬ್‍ಗಳನ್ನು ಖರೀದಿಸಲು ಮುಂದಾಗಿದೆ ಎನ್ನಲಾಗಿದೆ.

ಭಾರತೀಯ ಸೇನೆ ಈಗಾಗಲೇ ಈ ವಿಶೇಷ ಅಧಿಕಾರದ ಅಡಿಯಲ್ಲಿ ಸ್ಪೈಕ್ ಆಂಟಿ ಟ್ಯಾಂಕ್ ಮಿಸೈಲ್ ಖರೀದಿಸಲು ಮುಂದಾಗಿದೆ. ಇದನ್ನೂ ಓದಿ:ಬಾಲಾಕೋಟ್ ಏರ್ ಸ್ಟ್ರೈಕ್‍ನಲ್ಲಿ 170 ಉಗ್ರರು ಬಲಿ – ಮೃತದೇಹವನ್ನು ನದಿಗೆ ಎಸೆದಿದ್ದ ಪಾಕ್

ಪುಲ್ವಾಮಾದಲ್ಲಿ 44 ಸಿಆರ್‌ಪಿಎಫ್‌ ಯೋಧರು ಜೈಶ್ ಉಗ್ರನ ದಾಳಿಗೆ ಬಲಿಯಾದ ನಂತರ ಭಾರತ ಪ್ರತೀಕಾರ ತೀರಿಸಲು ಫೆ.26 ರಂದು ಪಾಕ್ ಆಕ್ರಮಿತ ಕಾಶ್ಮೀರವನ್ನು ದಾಟಿ ಬಾಲಾಕೋಟ್ ನಲ್ಲಿದ್ದ ಉಗ್ರರ ಶಿಬಿರದ ಮೇಲೆ ಬಾಂಬ್ ದಾಳಿ ನಡೆಸಿತ್ತು.

Comments

Leave a Reply

Your email address will not be published. Required fields are marked *