ಮಂಡ್ಯ: ಚುನಾವಣಾ ಸಮಯದಲ್ಲಿ ಮಾತಿನಲ್ಲೇ ಮನೆ ಕಟ್ಟಿದ್ದ ರಾಜಕಾರಣಿಗಳು ಈಗ ಎಲ್ಲಿ ಹೋಗಿದ್ದಾರೆ ಎಂದು ಮಂಡ್ಯ ಜನ ಪ್ರಶ್ನಿಸುತ್ತಿರುವ ವಿಚಾರವೊಂದು ಬೆಳಕಿಗೆ ಬಂದಿದೆ.
ಹೌದು. ಚುನಾವಣೆಯ ಸಮಯದಲ್ಲಿ ಮನೆ ಬಾಗಿಲಿಗೆ ಹೋಗಿ ಮತದಾರರ ಕೈಕಾಲು ಹಿಡಿದು ಅವರ ಮನೆಗೆ ಹೋಗಿ ಟೀ, ಕಾಫಿ, ಎಳನೀರು ಕುಡಿದು ಮತ ಭಿಕ್ಷೆ ಬೇಡುವ ತಂತ್ರಗಳೆಲ್ಲಾ ನಮ್ಮ ರಾಜಕೀಯ ವ್ಯವಸ್ಥೆಗೆ ಹಳೆಯದ್ದಾಗಿದೆ. ಆದರೆ ಇತ್ತೀಚಿನ ಕೆಲ ವರ್ಷಗಳಲ್ಲಿ ರಾಜಕಾರಣಿಗಳು ನಿಮ್ಮೂರಲ್ಲೇ ಮನೆ ಮಾಡಿ, ನಿಮ್ಮ ಜೊತೆಗೆಯೇ ಇರುತ್ತೇನೆ ಅನ್ನೋ ಹೊಸ ತಂತ್ರ ಬೆಳೆಸಿಕೊಂಡಿದ್ದಾರೆ. ಇದಕ್ಕೆ ನಟಿ ಸುಮಲತಾ ಅಂಬರೀಶ್ ಮತ್ತು ಕುಮಾರಸ್ವಾಮಿ ಪುತ್ರ ನಿಖಿಲ್ ಹೊರತಾಗಿಯೂ ಇಲ್ಲ.

ಎಲೆಕ್ಷನ್ಗೂ ಮೊದಲೇ ಮಂಡ್ಯದಲ್ಲೇ ಮನೆ ಮಾಡಿ ಮನೆ-ಮಗಳು ಎಂಬ ತನ್ನ ಹೇಳಿಕೆಯನ್ನು ಸಾಬೀತು ಪಡಿಸಲು ಸುಮಲತಾ ಅವರು ಮೈಸೂರಿನಿಂದಲೇ ಚುನಾವಣಾ ಪ್ರಚಾರದ ಹೊತ್ತಲ್ಲೂ ದಿನನಿತ್ಯ ಓಡಾಡುತ್ತಾ ಇದ್ದರು. ಇನ್ನು ನಿಮ್ಮೂರಲ್ಲೇ ಆಫೀಸ್ ಓಪನ್ ಮಾಡುತ್ತೇನೆ, ಇಲ್ಲೇ ಜಮೀನು ಖರೀದಿಸಿ ಇಲ್ಲೇ ಇರುತ್ತೇನೆ ಎಂದು ನಟ ನಿಖಿಲ್ ಕೂಡ ಮಾತು ಕೊಟ್ಟಿದ್ದರು.

ಆದರೆ ಮಂಡ್ಯದಲ್ಲಿ ಮತದಾನ ಮುಗಿದು ಇವತ್ತಿಗೆ 16 ದಿನಗಳೇ ಕಳೆದು ಹೋಗಿದೆ. ಮಳೆ, ಗಾಳಿ ಬೀಸಿ ವಿದ್ಯುತ್ ಕಂಬ, ಮರಗಳು ಉರುಳಿವೆ, ಬೆಳೆಗಳು ನಾಶವಾಗಿವೆ. ಹಲವಾರು ಹಳ್ಳಿಗಳಲ್ಲಿ ಕುಡಿಯಲು ನೀರಿಲ್ಲದೇ ಜನ ಒದ್ದಾಡುತ್ತಿದ್ದಾರೆ. ಹೀಗಾಗಿ ಮಾತಿನಲ್ಲೇ ಮನೆ ಕಟ್ಟಿದವರು ಎಲ್ಲಿ ಹೋಗಿದ್ದಾರೆ ಎಂದು ಇದೀಗ ಮಂಡ್ಯ ಜನ ಪ್ರಶ್ನೆ ಮಾಡುತ್ತಿದ್ದಾರೆ.

Leave a Reply