ರಾವಣನ ಲಂಕೆಯಲ್ಲಿ ಬುರ್ಕಾ ನಿಷೇಧವಾದ್ರೆ ರಾಮನ ಅಯೋಧ್ಯೆಯಲ್ಲಿ ಯಾಕೆ ನಿಷೇಧಿಸಬಾರದು: ಶಿವಸೇನೆ

ಮುಂಬೈ: ಶ್ರೀಲಂಕಾದಲ್ಲಿ ನಿಷೇಧಗೊಂಡಂತೆ ಭಾರತದಲ್ಲೂ ಭದ್ರತೆಯ ದೃಷ್ಟಿಯಿಂದ ಸಾರ್ವಜನಿಕ ಸ್ಥಳದಲ್ಲಿ ಬುರ್ಕಾವನ್ನು ನಿಷೇಧಿಸಬೇಕೆಂದು ಮಹಾರಾಷ್ಟ್ರದಲ್ಲಿ ಬಿಜೆಪಿಯ ಮೈತ್ರಿ ಪಕ್ಷವಾದ ಶಿವಸೇನೆ ಆಗ್ರಹಿಸಿದೆ.

ತನ್ನ ಮುಖವಾಣಿ ಸಾಮ್ನಾದಲ್ಲಿ ಬರೆದ ಸಂಪಾದಕೀಯದಲ್ಲಿ, ಶ್ರೀಲಂಕಾದ ಅಧ್ಯಕ್ಷ ಮೈತ್ರಿಪಾಲಾ ಸಿರಿಸೇನಾ ಅವರು ತಮ್ಮ ದೇಶದಲ್ಲಿ ಬುರ್ಕಾವನ್ನು ನಿಷೇಧ ಮಾಡಿದ್ದಾರೆ. ಅದೇ ರೀತಿಯಲ್ಲಿ ಭಾರತದಲ್ಲೂ ಬುರ್ಕಾವನ್ನು ನಿಷೇಧಿಸಬೇಕೆಂದು ಆಗ್ರಹಿಸಿದೆ.

ಪ್ರಧಾನಿ ಮೋದಿ ಅವರು ಶ್ರೀಲಂಕಾದ ನಡೆಯನ್ನು ಅನುಸರಿಸಬೇಕು. ರಾವಣನ ಲಂಕೆಯಲ್ಲಿ ಬುರ್ಕಾ ನಿಷೇಧವಾದರೆ ರಾಮನ ಅಯೋಧ್ಯೆಯಲ್ಲಿ ಯಾಕೆ ನಿಷೇಧಿಸಬಾರದು ಎಂದು ಶಿವಸೇನೆ ಪ್ರಶ್ನಿಸಿದೆ.

ಬುರ್ಕಾ ಧರಿಸುವುದರಿಂದ ಉಗ್ರರು ತಮ್ಮ ಮುಖ ಮುಚ್ಚಿಕೊಂಡು ಸುಲಭವಾಗಿ ತಪ್ಪಿಸಿಕೊಳ್ಳುತ್ತಾರೆ. ಈ ರೀತಿಯ ಸಂಪೂರ್ಣ ಮುಖ ಮುಚ್ಚಿಕೊಳ್ಳುವ ಉಡುಪುಗಳನ್ನು ಧರಿಸುವುದರಿಂದ ರಾಷ್ಟ್ರೀಯ ಭದ್ರತೆಗೆ ಹಿನ್ನಡೆಯಾಗುತ್ತಿದೆ. ಭಾರತದ ಮೇಲೂ ಉಗ್ರರು ದಾಳಿ ಮಾಡುವ ಸಾಧ್ಯತೆ ಇರುವುದರಿಂದ ಭದ್ರತೆಯ ದೃಷ್ಟಿಯಿಂದ ನಮ್ಮ ದೇಶದಲ್ಲೂ ಬುರ್ಕಾವನ್ನು ನಿಷೇಧಿಸುವಂತೆ ಸರ್ಕಾರ ಕ್ರಮಕೈಗೊಳ್ಳಬೇಕೆಂದು ಹೇಳಿದೆ.

ಈ ವಿಚಾರದಲ್ಲಿ ಪ್ರಧಾನಿ ಮೋದಿ ಅವರು ದೊಡ್ಡ ನಿರ್ಧಾರವನ್ನು ಕೈಗೊಳ್ಳಬೇಕು. ಉರಿ ದಾಳಿಯ ನಂತರ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಮತ್ತು ಪುಲ್ವಾಮಾ ದಾಳಿ ನಂತರ ಕೈಗೊಂಡ ಏರ್ ಸ್ಟ್ರೈಕ್ ನಿರ್ಧಾರದಂತೆ ಈ ವಿಚಾರದಲ್ಲೂ ವಿಶೇಷ ಆಸಕ್ತಿ ತೋರಿಸಿ ಬುರ್ಕಾವನ್ನು ನಿಷೇಧಿಸಬೇಕೆಂದು ಶಿವಸೇನೆ ಆಗ್ರಹಿಸಿದೆ.

ಸರಣಿ ಬಾಂಬ್ ದಾಳಿ ನಡೆದ ನಂತರ ಶ್ರೀಲಂಕಾ ಸರ್ಕಾರ ಬುರ್ಕಾ ಸೇರಿದಂತೆ ಮುಖವನ್ನು ಸಂಪೂರ್ಣವಾಗಿ ಮುಚ್ಚುವಂತಹ ವಸ್ತ್ರ ಧರಿಸುವುದನ್ನು ನಿಷೇಧಿಸಿದೆ. ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲಾ ಸಿರಿಸೇನಾ ಅವರು ಸೋಮವಾರ ಈ ಆದೇಶವನ್ನು ಹೊರಡಿಸಿದ್ದಾರೆ. ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಮುಖವನ್ನು ಸಂಪೂರ್ಣ ಮುಚ್ಚಿಕೊಳ್ಳುವ ವಸ್ತ್ರವನ್ನು ನಿಷೇಧಿಸಲಾಗಿದೆ ಎಂದು ಅಧ್ಯಕ್ಷರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ತುರ್ತು ಪರಿಸ್ಥಿತಿಯ ಸಮಯದಲ್ಲಿ ಸಂಪೂರ್ಣ ವಸ್ತ್ರವನ್ನು ಧರಿಸಿದರೆ ಸೇನಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತದೆ. ಹೀಗಾಗಿ ಮುಖವನ್ನು ಮುಚ್ಚಿಕೊಳ್ಳುವ ವಸ್ತ್ರಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಬುರ್ಕಾವನ್ನು ನಿಷೇಧ ಮಾಡಿದ ದೇಶಗಳ ಪೈಕಿ ಶ್ರೀಲಂಕಾ ಮೊದಲನೆಯದ್ದಲ್ಲ. ಈಗಾಗಲೇ ವಿಶ್ವದ 13 ದೇಶಗಳಲ್ಲಿ ಬುರ್ಕಾ ನಿಷೇಧಗೊಂಡಿದೆ. 2010ರಲ್ಲಿ ಉಗ್ರರ ದಾಳಿ ಬಳಿಕ ಫ್ರಾನ್ಸ್ ಸರ್ಕಾರ ಸಾರ್ವಜನಿಕ ಸ್ಥಳಗಳಲ್ಲಿ ಬುರ್ಕಾ ಧರಿಸುವುದನ್ನು ನಿಷೇಧಿಸಿತ್ತು. ನಂತರ ಬೆಲ್ಜಿಯಂ, ನೆದರ್ಲ್ಯಾಂಡ್ ಸರ್ಕಾರಗಳು ಬುರ್ಕಾ ನಿಷೇಧಿಸಿತ್ತು.

Comments

Leave a Reply

Your email address will not be published. Required fields are marked *