ಆಪರೇಷನ್ ಕಮಲಕ್ಕೆ ರಿವರ್ಸ್ ಆಪರೇಷನ್ – ಜೆಡಿಎಸ್ ಶಾಸಕರ ಆಡಿಯೋ ವೈರಲ್

ವಿಜಯಪುರ: ಮೈತ್ರಿ ಸರ್ಕಾರ ಬೀಳಿಸಲು ಆಪರೇಷನ್ ಕಮಲ ಮತ್ತೆ ಸದ್ದು ಮಾಡುತ್ತಿದೆ. ಇದಕ್ಕೆ ಪ್ರತಿ ಕಾಂಗ್ರೆಸ್ ಪ್ರತ್ಯುತ್ತರ ನೀಡಲು ರಿವರ್ಸ್ ಆಪರೇಷನ್ ನಡೆಸಿದೆಯಂತೆ.

ಈ ಸಂಬಂಧ ನಾಗಠಾಣ ಜೆಡಿಎಸ್ ಶಾಸಕ ದೇವಾನಂದ ಚವ್ಹಾಣ ಅವರು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ. ಶಾಸಕರು ಶಿವಾಜಿ ಎಂಬವರ ಜೊತೆಗೆ ಮಾತನಾಡಿದ್ದು, ದೇವರಹಿಪ್ಪರಗಿಯ ಬಿಜೆಪಿ ಶಾಸಕ ಸೋಮನಗೌಡ ಪಾಟೀಲ್ ಸಾಸನೂರು ಕಾಂಗ್ರೆಸ್ ಸೇರಲಿದ್ದಾರೆ ಎಂದು ತಿಳಿಸಲಾಗಿದೆ.

ಗೃಹ ಸಚಿವ ಎಂ.ಬಿ.ಪಾಟೀಲ್ ಹಾಗೂ ಶಾಸಕ ಸೋಮನಗೌಡ ಪಾಟೀಲ್ ನಡುವೆ ಒಳ್ಳೆಯ ಸಂಬಂಧವಿದೆ. ಒಂದು ವೇಳೆ ಎಂ.ಬಿ.ಪಾಟೀಲ್ ಅವರು, ಬಿಜೆಪಿ ಬಿಟ್ಟು ಕಾಂಗ್ರೆಸ್‍ಗೆ ಬರುವಂತೆ ಸೋಮನಗೌಡ ಅವರಿಗೆ ತಿಳಿಸಿದರೆ, ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಕಾಂಗ್ರೆಸ್ ಸೇರ್ಪಡೆಯಾಗುವ ಶಾಸಕರ ಪಟ್ಟಿಯಲ್ಲಿ ಸೋಮನಗೌಡ ಪಾಟೀಲ್ ಅವರ ಹೆಸರು ಮೊದಲಿಗೆ ಇದೆ ಎಂದು ದೇವಾನಂದ ಚವ್ಹಾಣ ತಿಳಿಸಿದ್ದಾರೆ.

ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಜೆಡಿಎಸ್ ಶಾಸಕ ದೇವಾನಂದ ಚವ್ಹಾಣ ಅವರು, ವೈರಲ್ ಆಗಿರುವ ಆಡಿಯೋ ನನ್ನದೆ. ಆದರೆ ಅದರಲ್ಲಿ ಕೆಲವೊಂದು ವಿಚಾರವನ್ನು ಎಡಿಟ್ ಮಾಡಲಾಗಿದೆ. ನಾನು ಮಾತನಾಡದೇ ಇರುವ ಕೆಲವು ವಿಚಾರಗಳನ್ನು ಸೇರಿಸಿದ್ದಾರೆ. ಎಂ.ಬಿ.ಪಾಟೀಲ್ ಹಾಗೂ ಸೋಮನಗೌಡ ಪಾಟೀಲ್ ಅವರ ಆತ್ಮೀಯತೆ ಬಗ್ಗೆ ಮಾತನಾಡಿದ್ದೇನೆ. ಪಕ್ಷ ಬಿಡುವ ಕುರಿತು ಏನನ್ನೂ ಹೇಳಿಲ್ಲ ಎಂದರು.

ಶಾಸಕ ಸೋಮನಗೌಡ ಪಾಟೀಲ್ ಅವರ ಬಗ್ಗೆ ಸಣ್ಣತಣ ತೋರುವುದು ಸರಿಯಲ್ಲ. ದುರುದ್ದೇಶಪೂರ್ವಕವಾಗಿ ಹೀಗೆ ಆಡಿಯೋ ವೈರಲ್ ಮಾತನಾಡಿದ್ದಾರೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡುತ್ತೇನೆ. ಕಾನೂನು ಹೋರಾಟ ಮಾಡುತ್ತೇನೆ ಎಂದು ದೇವಾನಂದ ಚವ್ಹಾಣ ಪ್ರತಿಕ್ರಿಯಿಸಿದ್ದಾರೆ.

Comments

Leave a Reply

Your email address will not be published. Required fields are marked *