ಬೆದರಿಸಲು ಪೆಟ್ರೋಲ್ ಸುರಿದುಕೊಂಡ ಪ್ರೇಮಿ – ಕಡ್ಡಿ ಗೀರಿ ಅಪ್ರಾಪ್ತೆ ಪರಾರಿ

ಲಕ್ನೋ: ತನ್ನನ್ನು ಮದುವೆಯಾಗುವಂತೆ ಪ್ರೇಮಿಯೊಬ್ಬ ಪೆಟ್ರೋಲ್ ಸುರಿದು ಆತ್ಮಹತ್ಯೆಗೆ ಯತ್ನಿಸಿದ ವೇಳೆ ಅಪ್ರಾಪ್ತೆಯೊಬ್ಬಳು ಬೆಂಕಿ ಹಚ್ಚಿ ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಈ ಘಟನೆಯಿಂದ ಅರವಿಂದ್ ನಿಶಾದ್ (20) ದೇಹದ ಶೇ.60 ಭಾಗ ಬೆಂಕಿಯಿಂದ ಸುಟ್ಟು ಹೋಗಿದ್ದು, ಸದ್ಯಕ್ಕೆ ಸಾವು-ಬದುಕಿನ ಮಧ್ಯೆ ಆಸ್ಪತ್ರೆಯಲ್ಲಿ ಹೋರಾಡುತ್ತಿದ್ದಾನೆ. ಈ ಘಟನೆ ಏಪ್ರಿಲ್ 20ರಂದು ನಡೆದಿದ್ದು, ಶನಿವಾರ ನಿಶಾದ್ ತಾಯಿ ಹುಡುಗಿ ಮತ್ತು ಆಕೆಯ ತಾಯಿ ವಿರುದ್ಧ ಕೊಲೆ ಕೇಸನ್ನು ಹಾಸಂಗಂಜ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

ಏನಿದು ಪ್ರಕರಣ?
ಖಾದ್ರಾ ಪ್ರದೇಶದ ನಿವಾಸಿಯಾಗಿದ್ದ ಅರವಿಂದ್ ನಿಶಾದ್ ತನ್ನ ನೆರೆಮನೆಯ ಬಾಲಕಿಯನ್ನು ಪ್ರೀತಿಸುತ್ತಿದ್ದನು. ಆಕೆಗೆ 15 ವರ್ಷಗಳಾಗಿದ್ದು, 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಇವರಿಬ್ಬರ ಮದುವೆಗೆ ಹುಡುಗಿಯ ಕುಟುಂಬದವರು ಒಪ್ಪಿದ್ದರು. ಹುಡುಗಿ ಅಪ್ರಾಪ್ತೆಯಾಗಿದ್ದಾಳೆ ಹೀಗಾಗಿ ಆಕೆಗೆ 18 ವರ್ಷವಾದ ಕೂಡಲೇ ಮದುವೆ ಮಾಡುವುದಾಗಿ ಹೇಳಿದ್ದರು. ಆದರೆ ನಿಶಾದ್ ನಾನು ಕಾಯುವುದಿಲ್ಲ ಈಗಲೇ ಮದುವೆ ಮಾಡಿಕೊಡಬೇಕು ಎಂದು ಹಠ ಮಾಡಿದ್ದಾನೆ.

ಕೊನೆಗೆ ಏಪ್ರಿಲ್ 20 ರಂದು ಈ ಬಗ್ಗೆ ಮಾತನಾಡಲು ಹುಡುಗಿ ಮತ್ತು ಆಕೆಯ ತಾಯಿ ನಿಶಾದ್ ಮನೆಗೆ ಬಂದಿದ್ದಾರೆ. ಈ ವೇಳೆ ಇಬ್ಬರ ಮಧ್ಯೆ ವಾದ ನಡೆದಿದೆ. ಆಗ ನಿಶಾದ್ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಈಗಲೇ ಮದುವೆ ಮಾಡಿಕೊಡಬೇಕು ಇಲ್ಲವಾದರಲ್ಲಿ ನಾನು ಬೆಂಕಿ ಹಚ್ಚಿಕೊಳ್ಳುತ್ತೇನೆ ಎಂದು ಬೆದರಿಸಲು ಮುಂದಾಗಿದ್ದಾನೆ.

ಈ ವೇಳೆ ನಿಶಾದ್‍ನನ್ನು ತಡೆಯದೆ ಹುಡುಗಿ ಬೆಂಕಿ ಕಡ್ಡಿ ಗೀರಿ ಆತನ ಮೈಮೇಲೆ ಎಸೆದಿದ್ದಾಳೆ. ಬಳಿಕ ಅಲ್ಲಿಂದ ತಾಯಿ ಮತ್ತು ಹುಡುಗಿ ಓಡಿ ಹೋಗಿದ್ದಾರೆ. ತಕ್ಷಣ ನಿಶಾದ್ ತಾಯಿ ಮತ್ತು ನೆರೆಹೊರೆಯುವರು ಆತನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಧೀರಜ್ ಶುಕ್ಲಾ ತಿಳಿಸಿದ್ದಾರೆ.

ವೈದ್ಯರು ಆತನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ. ಈ ಕುರಿತು ನಾವು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದೇವೆ. ಎಲ್ಲ ಆಯಾಮಗಳನ್ನು ವಿಚಾರಣೆ ಮಾಡುತ್ತಿದ್ದೇವೆ ಎಂದು ಧೀರಜ್ ಶುಕ್ಲಾ ಹೇಳಿದ್ದಾರೆ.

ಅರವಿಂದ ನಿಶಾದ್ ತಾಯಿ ಮಗನೇ ಪೆಟ್ರೋಲ್ ಸುರಿದುಕೊಂಡಿದ್ದಾನೆ ಎನ್ನುವ ವಿಚಾರವನ್ನು ತಳ್ಳಿ ಹಾಕಿದ್ದಾರೆ. ನನ್ನ ಮಗ ಮತ್ತು ಹುಡುಗಿ ಒಂದು ವರ್ಷದಿಂದ ಪ್ರೀತಿಸುತ್ತಿದ್ದರು. ಈ ವೇಳೆ ಆಕೆಯ ತಾಯಿ 2 ಲಕ್ಷ ಮತ್ತು ಚಿನ್ನಾಭರಣವನ್ನು ದೋಚಿಕೊಂಡಿದ್ದಾರೆ. ಹುಡುಗಿಯ ಮನೆಯವರ ನಡತೆ ಸರಿ ಇಲ್ಲದ್ದಕ್ಕೆ ಮಗ ಹುಡುಗಿಯಿಂದ ಅಂತರ ಕಾಯ್ದುಕೊಂಡಿದ್ದ. ಈ ವಿಚಾರಕ್ಕೆ ಸಿಟ್ಟಾಗಿ ಮಗನನ್ನು ಅವರು ಕೊಲೆ ಮಾಡಲು ಮುಂದಾಗಿದ್ದಾರೆ. ಈ ಘಟನೆ ನಡೆದಾಗ ನನ್ನ ಪತಿ ಮನೆಯಲ್ಲಿ ಇರಲಿಲ್ಲ. ಹಾಗಾಗಿ ನಾನು ಇಷ್ಟು ದಿನ ದೂರು ದಾಖಲಿಸಿರಲಿಲ್ಲ ಎಂದು ನಿಶಾದ್ ತಾಯಿ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *