ರೌಡಿಶೀಟರ್ ಕೊಲೆ – ಸ್ಯಾಂಡಲ್‍ವುಡ್ ನಟಿ, ತಾಯಿ ಅರೆಸ್ಟ್

ರಾಮನಗರ: ರೌಡಿಶೀಟರ್ ಸುನಿಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡದ ಚಿತ್ರನಟಿ ಹಾಗೂ ಆಕೆಯ ತಾಯಿಯನ್ನು ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಚಿತ್ರನಟಿ ಪ್ರಿಯಾಂಕಾ (ಸವಿತಾ) ಹಾಗೂ ಆಕೆಯ ತಾಯಿ ನಾಗಮ್ಮ ಬಂಧಿತ ಆರೋಪಿಗಳಾಗಿದ್ದಾರೆ.

ಏನಿದು ಪ್ರಕರಣ: ಚನ್ನಪಟ್ಟಣ ತಾಲೂಕಿನ ರಾಂಪುರದ ತೋಟದ ಮನೆಯೊಂದರಲ್ಲಿ ಜನವರಿ 29 ರಂದು ರೌಡಿ ಶೀಟರ್ ಸುನಿಲ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ, ಭೀಕರವಾಗಿ ಕೊಲೆ ಮಾಡಲಾಗಿತ್ತು. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ಚನ್ನಪಟ್ಟಣ ಗ್ರಾಮಾಂತರ ಪೋಲೀಸರು ತೀವ್ರ ತನಿಖೆ ನಡೆಸಿದ್ದರು. ಹಳೆ ಮನೆ ವಿಚಾರವಾಗಿಯೇ ಸುನೀಲ್ ನನ್ನು ಕೊಲೆ ಮಾಡಲಾಗಿದೆ ಎಂದು ಆತನ ಪೋಷಕರು ಆರೋಪಿಸಿದ್ದರು. ಅಲ್ಲದೆ ಕೊಲೆಯಲ್ಲಿ ನಟಿ ಪ್ರಿಯಾಂಕ ಮತ್ತು ಅವರ ತಾಯಿ ನಾಗಮ್ಮ ಕೈವಾಡವಿದೆ ಎಂದೂ ದೂರಿದ್ದರು.

ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಿದ ಪೊಲೀಸರು ಸುನಿಲ್ ನನ್ನು ಕೊಲೆ ಮಾಡಿದ್ದ ಮನು ಅಲಿಯಾಸ್ ಮಾದೇಗೌಡ, ಶಿವರಾಜ್ ಉರುಫ್ ಕುದುರೆ ಎಂಬವರನ್ನ ಬಂಧಿಸಿದ್ದರು. ಇವರನ್ನು ವಿಚಾರಣೆ ನಡೆಸಿದಾಗ ನಟಿ ಪ್ರಿಯಾಂಕ ಮತ್ತು ನಾಗಮ್ಮರ ಹೆಸರು ಸಹ ಕೇಳಿಬಂದಿತ್ತು. ಪ್ರಕರಣದ ಬಳಿಕ ತಲೆಮರೆಸಿಕೊಂಡಿದ್ದ ಇಬ್ಬರನ್ನು ಇದೀಗ ಪೋಲೀಸರು ಬಂಧಿಸಿದ್ದಾರೆ.

ಕೊಲೆಗೆ ಕಾರಣವೇನು?
ನಟಿ ಪ್ರಿಯಾಂಕ ಅವರ ಕಾರಿನ ಚಾಲಕನಾಗಿ ಸುನಿಲ್ ಕೆಲಸ ಮಾಡುತ್ತಿದ್ದನು. ಸಂಬಂಧದಲ್ಲಿ ಸುನಿಲ್ ನಟಿಯ ಅತ್ತೆಯ ಮಗನಾಗಿದ್ದಾನೆ. ಆದರೆ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಹಿನ್ನೆಲೆಯಲ್ಲಿ ರೌಡಿ ಶೀಟರ್ ಸುನೀಲ್ ನನ್ನು ಕೆಲಸದಿಂದ ಕಿತ್ತು ಹಾಕಲಾಗಿತ್ತು. ಇದರಿಂದ ಆಕ್ರೋಶಗೊಂಡಿದ್ದ ಸುನೀಲ್ ಪದೇ ಪದೇ ಫೋನ್ ಮಾಡಿ ಬೆದರಿಸಿ ನಟಿಯಿಂದ ಹಣ ವಸೂಲಿ ಮಾಡುತ್ತಿದ್ದನು. ಸುನಿಲ್‍ಗೆ ಹಣ ನೀಡಿ ಬೇಸತ್ತ ಪ್ರಿಯಾಂಕ ತನ್ನ ಸಂಬಂಧಿಕರಿಗೆ ಹೇಳಿ ಕೊಲೆ ಮಾಡಿಸಿದ್ದಳು. ಪ್ರಕರಣವನ್ನ ಭೇದಿಸಿದ ಪೊಲೀಸರು ಇದೀಗ ತಾಯಿ, ಮಗಳನ್ನು ಬಂಧಿಸಿದ್ದಾರೆ.

ನಟಿ ಪ್ರಿಯಾಂಕ ಕನ್ನಡದ ‘ಐಪಿಸಿ ಸೆಕ್ಷನ್ 300’ ಎಂಬ ಚಿತ್ರಗಳಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ಹಾಗೂ ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ಚಿತ್ರದಲ್ಲಿ ಹಾಸ್ಯ ನಟಿಯಾಗಿ ಅಭಿನಯಿಸಿದ್ದರು. ತೆಲುಗಿನ ಚಿತ್ರವೊಂದರಲ್ಲಿಯೂ ನಟಿಸಿದ್ದಾರೆ.

Comments

Leave a Reply

Your email address will not be published. Required fields are marked *