ಅಕ್ಷಯ್‌ ಕುಮಾರ್‌ನನ್ನು ನಮೋ ಟಿವಿಗೆ ನಿರೂಪಕರನ್ನಾಗಿ ಮಾಡ್ಬೇಕು: ಓವೈಸಿ ವ್ಯಂಗ್ಯ

– ಮೋದಿ ಅಕ್ಷಯ್ ಕುಮಾರ್‌ಗಿಂತ ಉತ್ತಮ ನಟ

ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಾಲಿವುಡ್ ನಟ ಅಕ್ಷಯ್ ಕುಮಾರ್ ಏಪ್ರಿಲ್ 24ರಂದು ಸಂದರ್ಶನ ಮಾಡಿದ್ದರು. ಈ ವಿಚಾರವಾಗಿ ಅನೇಕ ವಿಪಕ್ಷ ನಾಯಕರು ವ್ಯಂಗ್ಯವಾಡುತ್ತಿದ್ದಾರೆ. ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಕೂಡ ಲೇವಡಿ ಮಾಡಿದ್ದಾರೆ.

ಮಹಾರಾಷ್ಟ್ರದ ಮಾಲೇಗಾಂವ್‍ನಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ಟಿವಿ ನಿರೂಪಕರು ಸರಿಯಾಗಿ ನಟನೆ ಮಾಡುವುದಿಲ್ಲ. ಅವರು ನನ್ನ ಸಂದರ್ಶನ ಮಾಡುವುದು ಬೇಡ ಎಂದು ಪ್ರಧಾನಿ ಮೋದಿ ತಿಳಿಸಿದ್ದರು. ಹೀಗಾಗಿ ಉತ್ತಮ ನಟನನ್ನು ಈ ಕೆಲಸಕ್ಕೆ ಆಯ್ಕೆ ಮಾಡಿಕೊಳ್ಳುತ್ತೇನೆಂದು ಹೇಳಿ, ನಟ ಅಕ್ಷಯ್ ಕುಮಾರ್ ಅವರನ್ನು ಅಂತಿಮಗೊಳಿಸಿದ್ದರು ಎಂದು ವ್ಯಂಗ್ಯವಾಡಿದರು.

ಅಕ್ಷಯ್ ಕುಮಾರ್ ಅವರಿಗಿಂತ ಪ್ರಧಾನಿ ಮೋದಿ ಅವರೇ ಉತ್ತಮ ನಟರಾಗಿದ್ದಾರೆ. ಸಂದರ್ಶನದ ವೇಳೆ ನಾನು ಮಲಗುವುದು 4 ಗಂಟೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಅವರ ಮಾತುಗಳು ನಿಜವಾಗಿದ್ದರೇ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರಾ? 2 ಕೋಟಿ ಯುವಕರು ನಿರುದ್ಯೋಗಿಗಳಾಗಿ ಯಾಕೆ ಉಳಿದರು? ಜಮ್ಮು ಕಾಶ್ಮೀರದ ಪುಲ್ವಾಮಾಗೆ 50 ಕೆಜಿ ಆರ್‍ಡಿಎಕ್ಸ್ ಹೇಗೆ ಪ್ರವೇಶ ಮಾಡಿತು? ಈ ಘಟನೆಯಲ್ಲಿ 40 ಸೈನಿಕರು ಹೇಗೆ ಪ್ರಾಣ ಬಿಟ್ಟರು ಎಂದು ಪ್ರಶ್ನಿಸಿದ ಓವೈಸಿ ಅವರು, ಇದನ್ನೆಲ್ಲ ನೋಡಿದರೆ ಪ್ರಧಾನಿ ಮೋದಿ ಉತ್ತಮ ನಟರು ಎನ್ನುವುದು ತಿಳಿಯುತ್ತದೆ ಎಂದರು.

ನಮೋ ಟಿವಿಗೆ ಅಕ್ಷಯ್ ಕುಮಾರ್ ಅವರನ್ನು ನಿರೂಪಕರನ್ನಾಗಿ ಮಾಡಬೇಕು. ನೀವು ಮಾವಿನ ಹಣ್ಣನ್ನು ಕತ್ತರಿಸಿ ತಿನ್ನುತ್ತಿರೋ ಅಥವಾ ಕಚ್ಚಿ ತಿನ್ನುತ್ತೀರೋ ಎಂದು ಅಕ್ಷಯ್ ಕುಮಾರ್, ಮೋದಿ ಅವರಿಗೆ ಪ್ರಶ್ನೆ ಕೇಳುತ್ತಾರೆ. ಇದೊಂದು ಪ್ರಶ್ನೆಯೇ ಎಂದು ಕುಟುಕಿದರು.

Comments

Leave a Reply

Your email address will not be published. Required fields are marked *