ಬಾವಿ ಸ್ವಚ್ಛಗೊಳಿಸಲು ಹೋಗಿ ಕಾರ್ಮಿಕರಿಬ್ಬರ ದುರ್ಮರಣ!

ಬೆಂಗಳೂರು: ಬಾವಿ ಸ್ವಚ್ಛಗೊಳಿಸಲು ಹೋಗಿ ಇಬ್ಬರು ಕಾರ್ಮಿಕರ ದುರ್ಮರಣಕ್ಕೀಡಾದ ಘಟನೆ ಬೆಂಗಳೂರಿನ ಕೆಜಿ ಹಳ್ಳಿಯ ಪೊಲೀಸ್ ಠಾಣೆ ಬಳಿ ನಡೆದಿದೆ.

ಚೋಟು ಮತ್ತು ಗಫೂರ್ ಮೃತ ದುರ್ದೈವಿ ಕಾರ್ಮಿಕರು. ಟೀ ಅಂಗಡಿಯೊಳಗೆ ಇರುವ ನಾಲ್ಕು ರಿಂಕಲ್ ಬಾವಿಯನ್ನು ಶುಚಿಗೊಳಿಸಲೆಂದು ಕಾರ್ಮಿಕರಿಬ್ಬರು ಇಳಿದಿದ್ದಾರೆ. ಒಬ್ಬ ಒಳಗೆ ಇಳಿದು ಕ್ಲೀನ್ ಮಾಡುವಾಗ ಉಸಿರುಗಟ್ಟಿ ಸಾವನ್ನಪ್ಪಿದರೆ, ಮತ್ತೊರ್ವ ಬಾವಿಯೊಳಗೆ ಇಳಿದಾಗಲೇ ಮೃತಪಟ್ಟಿದ್ದಾರೆ.

ಈ ಬಗ್ಗೆ ಪೂರ್ವ ವಿಭಾಗದ ಡಿಸಿಪಿ ರಾಹುಲ್ ಕುಮಾರ್ ಶಹಪುರವಾಡ ಮಾತನಾಡಿ, ಟ್ಯಾನರಿ ರಸ್ತೆಯಲ್ಲಿರುವ ಬಿಸ್ಮಿಲ್ಲಾ ಟೀ ಪಾಯಿಂಟ್‍ನಲ್ಲಿ ಘಟನೆ ನಡೆದಿದೆ. ಟೀ ಪಾಯಿಂಟ್‍ನ ಹಿಂಭಾಗದಲ್ಲಿದ್ದ ಬಾವಿ ರೀತಿಯ ಸಂಪ್ ನಲ್ಲಿ ಕೊಳಚೆ ತುಂಬಿಕೊಂಡಿತ್ತು. ಕೊಳಚೆ ಸ್ವಚ್ಛಗೊಳಿಸಲು ಚೋಟು ಅನ್ನೋರನ್ನು ಕೆಲಸಕ್ಕೆ ಕಳುಹಿಸಲಾಗಿತ್ತು. ಈ ವೇಳೆ ಉಸಿರುಗಟ್ಟಿದ ಕಾರಣ ಚೋಟು ಜೋರಾಗಿ ಕಿರುಚಿಕೊಂಡಿದ್ದಾರೆ. ಆಗ ಗಫೂರ್ ಚೋಟುವಿಗೆ ಸಹಾಯ ಮಾಡಲು ಹೋಗಿ ಆತನೂ ಮೃತಪಟ್ಟಿದ್ದಾನೆ. ಹೀಗಾಗಿ ಇಬ್ಬರೂ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.

ಚೋಟು, ಸಣ್ಣಪುಟ್ಟ ಕೆಲಸ ಮಾಡುತ್ತಿದ್ದರೆ, ಗಫರ್ ಟೀ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಅಂಬೇಡ್ಕರ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಕೆಜಿ ಹಳ್ಳಿ ಪೊಲೀಸರು ಹಾಗೂ ಆಗ್ನಿ ಶಾಮಕ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸದ್ಯ ಪ್ರಕರಣ ಸಂಬಂಧ ಬಿಸ್ಮಿಲ್ಲಾ ಟೀ ಪಾಯಿಂಟ್ ನಡೆಸುತ್ತಿದ್ದ ನವೀದ್ ಅಹ್ದದ್‍ಯನ್ನು ಕೆಜಿ ಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Comments

Leave a Reply

Your email address will not be published. Required fields are marked *