ಐಎನ್‍ಎಸ್ ವಿಕ್ರಮಾದಿತ್ಯದಲ್ಲಿ ಬೆಂಕಿ – ಅಧಿಕಾರಿ ಸಾವು, 7 ಮಂದಿಗೆ ಗಾಯ

ಕಾರವಾರ: ದೇಶದ ಅತಿ ದೊಡ್ಡ ಯುದ್ಧ ನೌಕೆ ಐಎನ್‍ಎಸ್ ವಿಕ್ರಮಾದಿತ್ಯದ ಬಾಯ್ಲರ್ ನಲ್ಲಿ ಬೆಂಕಿ ಅವಘಡ ಸಂಭವಿಸಿ ಲೆಫ್ಟಿನೆಂಟ್ ಕಮಾಂಡರ್ ಒಬ್ಬರು ಮೃತಪಟ್ಟು 7 ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಅರಗಾ ಗ್ರಾಮದ ಕದಂಬ ನೌಕಾನೆಲೆಯಲ್ಲಿ ನಡೆದಿದೆ.

ಇಂದು ಬೆಳಗ್ಗೆ ವಿಕ್ರಮಾದಿತ್ಯದ ನೌಕಾ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿರುವ ವೇಳೆ ನೌಕೆಯ ಒಳಭಾಗದ ಬಾಯ್ಲರ್ ಕಂಪಾರ್ಟ್‌ಮೆಂಟ್‌ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯನ್ನು ನಂದಿಸುವ ಸಮಯದಲ್ಲಿ ಲೆಫ್ಟಿನೆಂಟ್ ಕಮಾಂಡರ್ ಡಿಎಸ್ ಚೌವ್ಹಾಣ್ ಮೃತಪಟ್ಟು 7 ಮಂದಿ ಸಿಬ್ಬಂದಿ ಗಂಭೀರ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ನೌಕಾನೆಲೆಯ ಪತಂಜಲಿ ಆಸ್ಪತ್ರೆಗೆ ದಾಖಲಿಸಿದ್ದು, ಬಾಯ್ಲರ್ ನಲ್ಲಿದ್ದ ಬೆಂಕಿಯನ್ನು ಸಿಬ್ಬಂದಿ ನಿಯಂತ್ರಣಕ್ಕೆ ತಂದು ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಚೌವ್ಹಾಣ್ ಅವರನ್ನು ಕೂಡಲೇ ಪತಂಜಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ನೌಕಾಸೇನೆ ತಿಳಿಸಿದೆ.

ಐಎನ್‍ಎಸ್ ವಿಕ್ರಮಾದಿತ್ಯ ಹಡಗು ದೇಶದ ಅತಿದೊಡ್ಡ ಯುದ್ಧನೌಕೆ ಆಗಿದ್ದು, ಭಾರತ ಪಾಕ್ ಮಧ್ಯೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದ್ದರಿಂದ ಗುಜರಾತಿಗೆ ತೆರಳಿದ್ದ ಐಎನ್‍ಎಸ್ ವಿಕ್ರಮಾದಿತ್ಯ ಇಂದು ಮುಂಜಾನೆ ಕಾರವಾರದ ಸೀಬರ್ಡ್ ನೌಕಾನೆಲೆಗೆ ವಾಪಸ್ಸಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ.

ಐಎನ್‍ಎಸ್ ವಿಕ್ರಮಾದಿತ್ಯ 284 ಮೀಟರ್ ಉದ್ದವಿದ್ದು 60 ಮೀಟರ್ ಎತ್ತರವಿದೆ. 40 ಸಾವಿರ ಟನ್ ತೂಕದ ಈ ನೌಕೆ 2014 ರಲ್ಲಿ ರಷ್ಯಾದಿಂದ ಭಾರತಕ್ಕೆ ಬಂದಿದೆ.

Comments

Leave a Reply

Your email address will not be published. Required fields are marked *