ಜಿಲ್ಲಾ ನಾಯಕರಿಗೆ ಕೋಟಿ-ಕೋಟಿ, ರಾಜ್ಯ ನಾಯಕರಿಗೆ ಇನ್ನೆಷ್ಟೋ: ಸಿ.ಟಿ ರವಿ

ಚಿಕ್ಕಮಗಳೂರು: ಜಿಲ್ಲಾ ನಾಯಕರಿಗೆ ಕೋಟಿ-ಕೋಟಿ ಕೊಟ್ಟು ಸೆಟ್ಲ್ ಮಾಡಿದ್ದಾರಂದರೆ, ರಾಜ್ಯ ಮಟ್ಟದ ನಾಯಕರಿಗೆ ಇನ್ನು ಹೆಚ್ಚಾಗಿ ಕೊಟ್ಟಿರಬಹುದು. ಈ ಬಗ್ಗೆ ಸಮಗ್ರ ತನಿಖೆಯಾಗಬೇಕೆಂದು ಶಾಸಕ ಸಿ.ಟಿ ರವಿ ಆಗ್ರಹಿಸಿದ್ದಾರೆ.

ನಾಮಪತ್ರ ಹಿಂಪಡೆಯಲು ರಾಜಣ್ಣ ಹಾಗೂ ಮುದ್ದುಹನುಮೇಗೌಡ ಮೂರುವರೆ ಕೋಟಿ ಹಣ ಪಡೆದಿದ್ದಾರೆಂಬ ಆಡಿಯೋ ವೈರಲ್‍ಗೆ ಪ್ರತಿಕ್ರಿಯೆ ನೀಡಿದ ಅವರು, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಸ್ಪರ್ಧಿಸಿರುವ ಕ್ಷೇತ್ರದಲ್ಲಿ ಈ ಪ್ರಮಾಣದಲ್ಲಿ ಹಣದ ಅವ್ಯವಹಾರ ನಡೆಯುತ್ತದೆ ಅಂದರೆ, ಪಾರದರ್ಶಕ ಚುನಾವಣೆ ಎಲ್ಲಿ ನಡೆದಿದೆ ಎಂದು ಮೈತ್ರಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಯಾರು ಯಾರು ಯಾವಯಾವ ಹೇಳಿಕೆಗಳನ್ನು ಕೊಡೋದಕ್ಕೆ ಎಷ್ಟೆಷ್ಟು ಹಣ ಪಡೆದಿದ್ದಾರೆ ಅನ್ನೋದು ಹೊರಬರಬೇಕಿದೆ. ದೇವೇಗೌಡರು ಜಾತಿ, ಹಣ ಹಾಗೂ ಅಧಿಕಾರದ ಬಲದ ಮೇಲೆ ಎಲ್ಲವನ್ನೂ ಮ್ಯಾನೇಜ್ ಮಾಡಬಹುದು ಎಂದು ಹೊರಟಿದ್ದಾರೆಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಹೇಳಿದರು.

ಹಾಸನ, ತುಮಕೂರು, ಮಂಡ್ಯ ಸೇರಿ ಬೇರೆ ಕಡೆಯೂ ದೊಡ್ಡ ಪ್ರಮಾಣದ ಹಣದ ವ್ಯವಹಾರ ನಡೆದಿದೆ ಅನ್ನಿಸುತ್ತದೆ. ರಾಜ್ಯ ಸಮ್ಮಿಶ್ರ ಸರ್ಕಾರ ವಿಶ್ವಾಸ ಹಾಗೂ ಅಜೆಂಡಾ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಹಣ ಮತ್ತು ಅಧಿಕಾರದ ದುರ್ಬಳಕೆಗೆ ಕಾರ್ಯನಿರ್ವಹಿಸುತ್ತಿದೆ ಅನ್ನೋದು ಕಾಂಗ್ರೆಸ್‍ನ ಸೋಶಿಯಲ್ ಮಿಡಿಯಾ ಇನ್‍ಚಾರ್ಜ್ ಮಾತನಾಡಿರುವ ಮಾತಿನಿಂದ ವ್ಯಕ್ತವಾಗ್ತಿದೆ ಎಂದರು.

ಈ ಆಡಿಯೋ ಸಂಬಂಧ ಸಮಗ್ರ ತನಿಖೆಯಾಗಿ ಹಣ ಎಲ್ಲಿಂದ ಬಂತು, ಯಾರ್ಯಾರು ತೆಗೆದುಕೊಂಡರು, ಕೊಟ್ಟೋರು ಯಾರು ಅನ್ನೋದು ಸಮಗ್ರ ತನಿಕೆಯಾಗಬೇಕು. ಕಾಂಗ್ರೆಸ್‍ನೊಳಗೆ ವಿಚಾರಿಸುತ್ತೇನೆ. ನೋಡುತ್ತೇನೆ, ನೋಟಿಸ್ ಕೊಡುತ್ತೇನೆ ಅನ್ನೋದಕ್ಕೆ ಇದು ಕಾಂಗ್ರೆಸ್‍ನೊಳಗಿನದ್ದಲ್ಲ. ಪ್ರಜಾಪ್ರಭುತ್ವವನ್ನ ಕಗ್ಗೊಲೆ ಮಾಡುವಂತ ಕೃತ್ಯ ಇದಾಗಿದೆ. ಹೀಗಾಗಿ ಈ ಬಗ್ಗೆ ರಾಜ್ಯದ ಜನಕ್ಕೆ ಉತ್ತರಿಸಬೇಕಾಗಿದೆ. ಹಣ ಕೊಡೋದು ತೆಗೆದುಕೊಳ್ಳೋದು ಎರಡೂ ಲಂಚದ ವ್ಯಾಪ್ತಿಯಲ್ಲಿ ಬರುತ್ತದೆ. ಆ ಇಬ್ಬರ ಮೇಲೂ ಲಂಚ ನಿಗ್ರಹ ಕಾಯ್ದೆ ಮೂಲಕ ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಇದೇ ವೇಳೆ ಆಗ್ರಹಿಸಿದರು.

Comments

Leave a Reply

Your email address will not be published. Required fields are marked *