ಕಂಪ್ಲಿ ಶಾಸಕ ಜೆ.ಎನ್.ಗಣೇಶ್‍ಗೆ ಜಾಮೀನು ಮಂಜೂರು

ಬೆಂಗಳೂರು: ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಜೈಲು ಸೇರಿದ್ದ ಶಾಸಕ ಕಂಪ್ಲಿ ಗಣೇಶ್‍ಗೆ ಇಂದು ಜಾಮೀನು ಸಿಕ್ಕಿದೆ.

ಹೈಕೋರ್ಟ್ ಏಕಸದಸ್ಯ ಪೀಠ ಇಂದು ಶಾಸಕರಿಗೆ ಷರತ್ತು ಬದ್ಧ ಜಾಮೀನು ನೀಡಿದೆ. ಈ ಮೊದಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಗಣೇಶ್ ಜಾಮೀನು ಅರ್ಜಿ ತಿರಸ್ಕಾರವಾಗಿತ್ತು. ಬಂಧನಕ್ಕೊಳಗಾಗಿ 62 ದಿನಗಳ ಬಳಿಕ ಕಂಪ್ಲಿ ಗಣೇಶ್ ಜಾಮೀನು ಪಡೆಯುವ ಮೂಲಕ ಜೈಲಿನಿಂದ ಹೊರ ಬರಲಿದ್ದಾರೆ.

ಜನವರಿಯಲ್ಲಿ ಆಪರೇಷನ್ ಕಮಲದ ಭೀತಿ ಹಿನ್ನೆಲೆಯಲ್ಲಿ ಒಗ್ಗಟ್ಟು ಪ್ರದರ್ಶಿಸಲು ಕಾಂಗ್ರೆಸ್ ಶಾಸಕರು ಈಗಲ್ ಟನ್ ರೆಸಾರ್ಟ್ ಸೇರಿಕೊಂಡಿದ್ದರು. ಈ ವೇಳೆ ಹೊಸಪೇಟೆ ಶಾಸಕ ಆನಂದ್ ಸಿಂಗ್ ಮತ್ತು ಕಂಪ್ಲಿ ಶಾಸಕ ಗಣೇಶ್ ನಡುವೆ ಗಲಾಟೆ ನಡೆದಿತ್ತು. ಅಲ್ಲದೆ ಗಲಾಟೆ ವಿಕೋಪಕ್ಕೆ ತಿರುಗಿ ಬಾಟಲಿಯಿಂದ ಹೊಡೆದುಕೊಂಡಿದ್ದರು. ಘಟನೆಯಲ್ಲಿ ಆನಂದ್ ಸಿಂಗ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಹಲ್ಲೆಯ ಬಳಿಕ  ನಾಪತ್ತೆಯಾಗಿದ್ದ ಗಣೇಶ್ ಅವರನ್ನು ಫೆಬ್ರವರಿ 20ರಂದು ಅಹಮದಾಬಾದ್ ನಲ್ಲಿ  ಬಂಧಿಸಲಾಗಿತ್ತು.

Comments

Leave a Reply

Your email address will not be published. Required fields are marked *