ಜಪಾನ್-ಜರ್ಮನಿ ಗಡಿ ಹಂಚಿಕೊಂಡಿವೆ ಎಂದ ಇಮ್ರಾನ್ ಖಾನ್ ಕಾಲೆಳೆದ ನೆಟ್ಟಿಗರು

– ಮಾಜಿ ಪತ್ನಿಯಿಂದಲೇ ವ್ಯಂಗ್ಯ, ವಿಡಿಯೋ ನೋಡಿ

ಇಸ್ಲಾಮಾಬಾದ್: ಜಪಾನ್ ಹಾಗೂ ಜರ್ಮನಿ ದೇಶಗಳು ಗಡಿ ಹಂಚಿಕೊಂಡಿವೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ಇಮ್ರಾನ್ ಖಾನ್ ಅವರ ಕಾಲೆಳೆದಿದ್ದಾರೆ.

ಇಮ್ರಾನ್ ಖಾನ್ ಅವರು ಸೋಮವಾರ ಇರಾನ್‍ಗೆ ಭೇಟಿ ನೀಡಿದ್ದರು. ಈ ವೇಳೆ ಇರಾನ್ ಅಧ್ಯಕ್ಷ ರೌಹಾನಿ ಅವರ ಜೊತೆಗೆ ಜಂಟಿ ಸುದ್ದಿಗೋಷ್ಠಿ ವೇಳೆ ಇಮ್ರಾನ್ ಖಾನ್, ಎರಡನೇ ವಿಶ್ವ ಯುದ್ಧ ನಂತರ ಜರ್ಮನಿ ಮತ್ತು ಜಪಾನ್ ಗಡಿಯಲ್ಲಿ ಎರಡೂ ದೇಶಗಳು ಜಂಟಿಯಾಗಿ ಕಾರ್ಖಾನೆ ಸ್ಥಾಪಿಸಿವೆ ಎಂದು ಹೇಳಿಕೆ ನೀಡಿದ್ದರು.

ಇಮ್ರಾನ್ ಖಾನ್ ಅವರ ತಪ್ಪನ್ನು ಗುರುತಿಸಿದ ಪಾಕ್ ಪತ್ರಕರ್ತರು, ಜಪಾನ್ ಈಶಾನ್ಯ ಏಷ್ಯಾದ ಪೆಸಿಫಿಕ್ ದ್ವೀಪದಲ್ಲಿದೆ. ಜರ್ಮನಿಯು ಯುರೋಪ್‍ನ ಮಧ್ಯದಲ್ಲಿದೆ. ಎರಡನೇ ಮಹಾಯುದ್ಧದ ವೇಳೆ ಎರಡೂ ದೇಶಗಳು ಮಿತ್ರರಾಷ್ಟ್ರಗಳಾಗಿದ್ದವು. ಆದರೆ ಪ್ರಧಾನಿ ಇಮ್ರಾನ್ ಅವರು ತಪ್ಪಾಗಿ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.

ಇಮ್ರಾನ್ ಖಾನ್ ಅವರ ಮಾಜಿ ಪತ್ನಿ ರೆಹಮ್ ಖಾನ್ ಅವರು ವೀಡಿಯೊವನ್ನು ಟ್ವೀಟ್ ಮಾಡಿ ಮಾಡಿದ್ದು, ಜರ್ಮನಿ ಹಾಗೂ ಜಪಾನ್ ಗಡಿ ಹಂಚಿಕೊಂಡಿದ್ಯಾ? ಇದು ಪಾಕಿಸ್ತಾನದ ಪ್ರಧಾನಿಯವರ ಅಧ್ಯಯನ ಎಂದು ವ್ಯಂಗ್ಯವಾಡಿದ್ದಾರೆ.

ಇಮ್ರಾನ್ ಖಾನ್ ಹೇಳಬೇಕಿದ್ದದ್ದು ಯುರೋಪಿಯನ್ ದೇಶಗಳಾದ ಜರ್ಮನಿ ಹಾಗೂ ಫ್ರಾನ್ಸ್ ಹೆಸರು. ಎರಡನೇ ಮಹಾಯುದ್ಧದ ನಂತರ ಈ ಎರಡೂ ದೇಶಗಳು ಆರ್ಥಿಕ ಹಾಗೂ ಸೇನಾ ಸಹಕಾರಕ್ಕೆ ಸಹಿ ಹಾಕಿದ್ದವು.

ಈ ಹಿಂದೆಯೂ ಇಮ್ರಾನ್ ಖಾನ್ ಇಂತಹದ್ದೇ ಎಡವಟ್ಟು ಮಾಡಿಕೊಂಡಿದ್ದರು. ಆಫ್ರಿಕಾ ಮುಂದುವರಿಯುತ್ತಿರುವ ರಾಷ್ಟ್ರ ಎಂದು ಕಳೆದ ವರ್ಷ ಡಿಸೆಂಬರ್ ನಲ್ಲಿ ಹೇಳಿ ನೆಟ್ಟಿಗರ ಟೀಕೆಗೆ ಗುರಿಯಾಗಿದ್ದರು.

Comments

Leave a Reply

Your email address will not be published. Required fields are marked *