ಮತದಾನ ಮಾಡಲು ಲಂಡನ್‍ನಿಂದ ಆಗಮಿಸಿದ ರೆಡ್ಡಿ ಪುತ್ರ

ಬಳ್ಳಾರಿ: ಮತದಾನ ಮಾಡಲು ಮಾಜಿ ಸಚಿವ, ಗಣಿಧಣಿ ಜನಾರ್ದನ ರೆಡ್ಡಿ ಅವರ ಪುತ್ರ ಕಿರೀಟಿ ಲಂಡನ್‍ನಿಂದ ಆಗಮಿಸಿದ್ದಾರೆ.

ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮಿ ಅರುಣಾ, ಪುತ್ರಿ ಬ್ರಹ್ಮಿಣಿ ಹಾಗೂ ಮಗ ಕಿರೀಟಿ ಬಳ್ಳಾರಿಯ ಬೂತ್ 5 ಗೆ ಆಗಮಿಸಿ ಮತದಾನ ಮಾಡಿದ್ದಾರೆ. ಕಿರೀಟಿಯ ಮೊದಲ ಮತದಾನ ಆಗಿರುವುದರಿಂದ ಅವರು ಮತ ಚಲಾಯಿಸಲು ಲಂಡನ್‍ನಿಂದ ಆಗಮಿಸಿದ್ದಾರೆ. ರೆಡ್ಡಿ ಮಾವ ಪರಮೇಶ್ವರ ರೆಡ್ಡಿ ಹಾಗೂ ಅತ್ತೆ ನಾಗಲಕ್ಷಮ್ಮ ಅವರು ಕೂಡ ಮತದಾನ ಮಾಡಿದ್ದಾರೆ.

ಬಳ್ಳಾರಿಯಲ್ಲಿ ಮತದಾನದ ನಂತರ ಮಾತನಾಡಿದ ಕಿರೀಟಿ, ಮತದಾನ ಮಾಡಲೆಂದು ನಾನು ಲಂಡನ್‍ನಿಂದ ಆಗಮಿಸಿದ್ದೇನೆ. ನನಗೆ ಇದು ಮೊದಲ ಮತ ಆಗಿರುವುದರಿಂದ ತುಂಬಾ ಖುಷಿಯಾಗಿದೆ. ನನ್ನ ತಂದೆ ಜೊತೆಗೆ ಇಲ್ಲದಿರುವುದು ಅಷ್ಟೇ ದುಃಖ ಸಹ ಆಗಿದೆ. ನಾನು ಲಂಡನ್‍ನಲ್ಲಿ ರಾಜಕೀಯ ಶಾಸ್ತ್ರ ವಿದ್ಯಾಭ್ಯಾಸ ಮಾಡುತ್ತಿದ್ದೇನೆ. ನನಗೆ ಮುಂದೆ ಅವಕಾಶ ಸಿಕ್ಕರೆ ರಾಜಕೀಯಕ್ಕೆ ಬರುವೆ. ಆದರೆ ಸದ್ಯಕ್ಕೆ ನನ್ನ ಆಯ್ಕೆ ಚಿತ್ರರಂಗ. ಹಾಗಾಗಿ ನಾನು ಮೊದಲು ಚಿತ್ರರಂಗದಲ್ಲಿ ನಟನೆಯ ನಂತರ ರಾಜಕೀಯದ ಬಗ್ಗೆ ಚಿಂತಿಸುವೆ ಎಂದು ಹೇಳಿದರು.

ಬಳ್ಳಾರಿಯಲ್ಲಿ ಮತಚಲಾಯಿಸುವ ಹಕ್ಕು ಈ ಬಾರಿಯೂ ಜನಾರ್ದನ ರೆಡ್ಡಿಗೆ ಸಿಕ್ಕಿಲ್ಲ. ಈ ಮೂಲಕ ಈ ಬಾರಿಯೂ ಚುನಾವಣೆಯಲ್ಲಿ ಮತದಾನ ಮಾಡುವ ಅವಕಾಶವನ್ನು ಕಳೆದುಕೊಂಡಿದ್ದಾರೆ. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ರೆಡ್ಡಿ ಬಳ್ಳಾರಿಗೆ ಎಂಟ್ರಿ ಮಾಡದಂತೆ ಕೋರ್ಟ್ ಷರತ್ತು ವಿಧಿಸಿತ್ತು. ಈ ಮಧ್ಯೆ ರೆಡ್ಡಿ ಮತದಾನ ಮಾಡಲು ಅವಕಾಶ ಕೋರಿ ಅರ್ಜಿ ಸಲ್ಲಿಸಿದ್ದರು. ಆದ್ರೆ ಕೋರ್ಟ್ ರೆಡ್ಡಿ ಮನವಿಯನ್ನು ಅಂಗೀಕರಿಸಲಿಲ್ಲ. ಹೀಗಾಗಿ ಅವರು ಬಳ್ಳಾರಿಯಲ್ಲಿ ಈ ಬಾರಿಯೂ ಮತದಾನ ಮಾಡಲ್ಲ ಎನ್ನಲಾಗಿದೆ.

ಜನಾರ್ದನರೆಡ್ಡಿ ಗದಗ್‍ನಲ್ಲಿ ಮತದಾನಕ್ಕೆ ನೋಂದಣಿ ಮಾಡಿಸಿರುವುದು ಕೂಡ ರದ್ದಾಗಿದೆ. ಈ ಎಲ್ಲಾ ಕಾರಣಗಳಿಂದ ರೆಡ್ಡಿಗೆ ಸದ್ಯ ಎಲ್ಲೂ ಮತದಾನ ಮಾಡುವ ಹಕ್ಕಿಲ್ಲ ಎಂಬುದಾಗಿ ತಿಳಿದುಬಂದಿದೆ. ಈ ಹಿಂದೆ ನಡೆದ ವಿಧಾನಸಭೆ ಚುನಾವಣೆಯಲ್ಲಿಯೂ ಜನಾರ್ದನ ರೆಡ್ಡಿ ಮತ ಚಲಾಯಿಸಿರಲಿಲ್ಲ.

Comments

Leave a Reply

Your email address will not be published. Required fields are marked *