ಒಂಟಿ ರನ್ ಕದಿಯಲು ನಿರಾಕರಿಸಿದ್ದು ಏಕೆ – ಧೋನಿ ಸ್ಪಷ್ಟನೆ

ಬೆಂಗಳೂರು: ಆರ್ ಸಿಬಿ ವಿರುದ್ಧ ಪಂದ್ಯದಲ್ಲಿ ಧೋನಿ ಮತ್ತೊಮ್ಮೆ ನಾಯಕತ್ವದ ಹಿಂದಿನ ಭಿನ್ನ ಲೆಕ್ಕಾಚಾರಗಳನ್ನು ತೆರೆದಿಟ್ಟಿದ್ದು, ಬ್ಯಾಟಿಂಗ್ ವೇಳೆ ಒಂಟಿ ರನ್ ಕದಿಯಲು ನಿರಾಕರಿಸಿದ್ದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಏಕಾಂಗಿಯಾಗಿ ಪಂದ್ಯದ ಜವಾಬ್ದಾರಿಯನ್ನ ವಹಿಸಿಕೊಂಡ ಧೋನಿ ಕ್ಯಾಪ್ಟನ್ ಆಗಿ ಅಭಿಮಾನಿಗಳ ಮನಗೆದ್ದಿದ್ದಾರೆ. ಗೆಲ್ಲಲು ಕಷ್ಟಸಾಧ್ಯ ಎಂಬ ಸಂದರ್ಭದಲ್ಲೂ ಆತ್ಮವಿಶ್ವಾಸ ಕಳೆದುಕೊಳ್ಳದ ಧೋನಿ ಆ ಸಂದರ್ಭದಲ್ಲಿ ತಮ್ಮ ಚಿಂತನೆ ಏನಿತ್ತು ಎಂಬುವುದನ್ನು ತಿಳಿಸಿದ್ದಾರೆ.

ಪಂದ್ಯದ ಬಳಿಕ ಮಾತನಾಡಿದ ಧೋನಿ, ಪಂದ್ಯದಲ್ಲಿ ಅತಿ ಹೆಚ್ಚು ರನ್ ಬೇಕಾಗಿರುವುದರಿಂದ ಸ್ಟ್ರೈಕ್ ನಾನೇ ಎದುರಿಸಲು ನಿರ್ಧರಿಸಿದ್ದೆ. ಏಕೆಂದರೆ ಇಂತಹ ಸಂದರ್ಭದಲ್ಲಿ ಹೊಸ ಬ್ಯಾಟ್ಸ್ ಮನ್‍ಗೆ ಕ್ರಿಸ್‍ಗೆ ಹೊಂದಿಕೊಳ್ಳುವುದು ಕಷ್ಟಸಾಧ್ಯವಾಗುತ್ತದೆ. ಆ ವೇಳೆಗೆ ಕೆಲ ಎಸೆತಗಳು ವ್ಯರ್ಥವಾಗುವ ಸಂಭವ ಹೆಚ್ಚು. ಆದ್ದರಿಂದ ಈ ಜವಾಬ್ದಾರಿಯನ್ನು ನಾನು ತೆಗೆದುಕೊಂಡೆ. ಅಂತಿಮವಾಗಿ ಕೆಲವೇ ರನ್ ಗಳ ಅಂತರದಿಂದ ಸೋಲುಂಡ ಸಂದರ್ಭದಲ್ಲಿ ಈ ಬಗ್ಗೆ ಮಾತನಾಡುವುದು ಹೆಚ್ಚು. ಆದರೆ ಒಮ್ಮೆ ಬ್ಯಾಟ್ಸ್ ಮನ್ ಆಡುತ್ತಿದ್ದರೆ ಆತ ತಂಡದ ಗೆಲುವಿಗಾಗಿ ಮಾತ್ರ ಚಿಂತಿಸುತ್ತಾನೆ ಎಂದಿದ್ದಾರೆ.

ಧೋನಿ ಅವರ ಈ ನಿರ್ಧಾರವನ್ನು ಸಿಎಸ್‍ಕೆ ಕೋಚ್ ಸ್ಟಿಫನ್ ಫ್ಲೆಮಿಂಗ್ ಕೂಡ ಪ್ರಶ್ನೆ ಮಾಡುವುದಿಲ್ಲ ಎಂದು ತಿಳಿಸಿದ್ದು, ಧೋನಿ ಹೆಚ್ಚು ಬೌಂಡರಿ, ಸಿಕ್ಸರ್ ಸಿಡಿಸಲು ಚಿಂತಿಸಿದ್ದರು. ಇದಕ್ಕೆ ಅವರದ್ದೇ ಆದ ಕೆಲ ಚಿಂತನೆಗಳು ಇರುತ್ತವೆ. ಅವರು ತುಂಬಾ ಚಿಂತನೆ ನಡೆಸಿಯೇ ಆಡುತ್ತಾರೆ. ಯಾವುದೇ ಕಾರಣಕ್ಕೂ ಇದನ್ನ ಪ್ರಶ್ನೆ ಮಾಡಲ್ಲ ಎಂದಿದ್ದಾರೆ.

ಪ್ರಶ್ನೆ ಎದ್ದಿದ್ದು ಯಾಕೆ?
ಆರ್‍ಸಿಬಿ 1 ರನ್ ಅಂತರದಲ್ಲಿ ಪಂದ್ಯವನ್ನು ಗೆದ್ದಿದ್ದರೂ ಕೊನೆಯ ಸ್ಲಾಗ್ ಓವರ್ ನಲ್ಲಿ ಮೂರು ಒಂಟಿ ರನ್ ಗಳನ್ನು ಪಡೆಯಲು ಧೋನಿ ಮುಂದಾಗಿರಲಿಲ್ಲ. ಒಂದು ವೇಳೆ ಧೋನಿ ರನ್ ಗಳಿಸಿದ್ದರ ಪಂದ್ಯವನ್ನು ಚೆನ್ನೈ ಗೆದ್ದುಕೊಳ್ಳುವ ಸಾಧ್ಯತೆ ಇತ್ತು ಎನ್ನುವುದು ಕ್ರಿಕೆಟ್ ಪಂಡಿತರ ಲೆಕ್ಕಾಚಾರ.

ಕೊನೆಯ ಓವರ್ ಹೀಗಿತ್ತು:
ಕೊನೆಯ 6 ಎಸೆತದಲ್ಲಿ ಚೆನ್ನೈ ತಂಡ 26 ರನ್ ಗಳಿಸಬೇಕಿತ್ತು. ಉಮೇಶ್ ಯಾದವ್ ಎಸೆದ ಮೊದಲ ಎಸೆತವನ್ನು ಧೋನಿ ಬೌಂಡರಿಗೆ ಅಟ್ಟಿದರೆ ನಂತರದ ಎರಡು ಎಸೆತಗಳನ್ನು ಸಿಕ್ಸರ್‍ಗೆ ಅಟ್ಟಿದರು. ನಾಲ್ಕನೇಯ ಎಸೆತದಲ್ಲಿ 2 ರನ್ ಓಡಿದ ಧೋನಿ 5ನೇ ಎಸೆತದಲ್ಲಿ ಸಿಕ್ಸರ್ ಸಿಡಿಸಿದರು. ಕೊನೆಯ ಎಸೆತದಲ್ಲಿ ಎರಡು ಬೇಕಿತ್ತು. ಧೋನಿ ಸ್ಟ್ರೈಕ್ ನಲ್ಲಿದ್ದ ಕಾರಣ ಚೆನ್ನೈ ಪಂದ್ಯ ಗೆಲ್ಲುತ್ತದೆ ಎನ್ನುವ ನಿರೀಕ್ಷೆ ಇತ್ತು. ಆದರೆ ಕೊನೆಯ ಎಸೆತ ಧೋನಿ ಬ್ಯಾಟಿಗೆ ಸಿಗದೇ ಬಾಲ್ ಕೀಪರ್ ಪಾರ್ಥಿವ್ ಪಟೇಲ್ ಕೈಗೆ ಸಿಕ್ಕಿತು. ಆದರೂ ಒಂದು ರನ್ ಓಡಲು ಪ್ರಯತ್ನಿಸುತ್ತಿದ್ದಾಗ ಪಾರ್ಥಿವ್ ಪಟೇಲ್ ಶಾರ್ದೂಲ್ ಠಾಕೂರ್ ಅವರನ್ನು ರನೌಟ್ ಮಾಡಿದರು. ಈ ಮೂಲಕ ಬೆಂಗಳೂರು ತಂಡ 1 ರನ್‍ನಿಂದ ಪಂದ್ಯವನ್ನು ರೋಚಕವಾಗಿ ಗೆದ್ದುಕೊಂಡಿತು.

Comments

Leave a Reply

Your email address will not be published. Required fields are marked *