ಐಪಿಎಲ್‍ನಲ್ಲಿ ದಾಖಲೆ ಬರೆದ ಧೋನಿ

ಬೆಂಗಳೂರು: ಅಂತಿಮ ಎಸೆತದವರೆಗೂ ಭಾರೀ ಕುತೂಹಲದಿಂದ ನಡೆದ ಚೆನ್ನೈ, ಆರ್ ಸಿಬಿ ಪಂದ್ಯದಲ್ಲಿ ಧೋನಿ ಸ್ಫೋಟಕ 84 ರನ್ ಸಿಡಿಸಿದ್ದು, ಐಪಿಎಲ್ ನಲ್ಲಿ ಇದು ಅವರ ವೈಯಕ್ತಿಕ ಅಧಿಕ ರನ್ ಮೊತ್ತವಾಗಿದೆ. ಆ ಮೂಲಕ ಐಪಿಎಲ್ ನಲ್ಲಿ 4 ಸಾವಿರ ರನ್ ಪೂರೈಸಿದ ಮೊದಲ ನಾಯಕ ಹಾಗೂ ಭಾರತೀಯ ಆಟಗಾರ ಆಗಿದ್ದಾರೆ.

ಒಬ್ಬಂಟಿಯಾಗಿ ತಂಡವನ್ನು ಜಯದ ಹೊಸ್ತಿನಲ್ಲಿ ತಂದಿಟ್ಟಿದ್ದ ಧೋನಿ, ಪಂದ್ಯದಲ್ಲಿ 48 ಎಸೆತಗಳಲ್ಲಿ 5 ಬೌಂಡರಿ, 7 ಸಿಕ್ಸರ್ ಸಿಡಿಸಿ 84 ರನ್ ಗಳಿಸಿದ್ದರು. ಆದರೆ ತಂಡಕ್ಕೆ ಜಯ ತಂದುಕೊಡಲು ವಿಫಲರಾದರು. ಅಂತಿಮ ಓವರಿನಲ್ಲಿ 26 ರನ್ ಗುರಿ ಪಡೆದ ಸಿಎಸ್‍ಕೆ 24 ರನ್ ಗಳಿಸಿ 1 ರನ್ ಅಂತರದಲ್ಲಿ ಸೋಲು ಕಂಡಿತು.

ಧೋನಿ ಸಿಕ್ಸರ್: ಪಂದ್ಯದಲ್ಲಿ ಧೋನಿ 7 ಸಿಕ್ಸರ್ ಸಿಡಿಸಿದ್ದು ಆ ಮೂಲಕ ಐಪಿಎಲ್ ನಲ್ಲಿ 203 ಸಿಕ್ಸರ್ ಸಿಡಿಸಿದ ಸಾಧನೆಯನ್ನು ಮಾಡಿದರು. ಈ ಪಟ್ಟಿಯಲ್ಲಿ ಕ್ರಿಸ್ ಗೇಲ್ 323 ಸಿಕ್ಸರ್ ಗಳೊಂದಿಗೆ ಮೊದಲ ಸ್ಥಾನದಲ್ಲಿ ಇದ್ದು, ಎಬಿಡಿ 214 ಸಿಕ್ಸರ್ ಸಿಡಿಸಿ 2ನೇ ಸ್ಥಾನದಲ್ಲಿದ್ದಾರೆ. ರೋಹಿತ್ ಹಾಗೂ ಸುರೇಶ್ ರೈನಾ 190 ಸಿಕ್ಸರ್ ಗಳೊಂದಿಗೆ ನಾಲ್ಕನೇಯ ಸ್ಥಾನ ಪಡೆದಿದ್ದಾರೆ.

ಪಂದ್ಯದಲ್ಲಿ ಧೋನಿ ಮತ್ತೊಂದು ಸಾಧನೆಯನ್ನು ಮಾಡಿದ್ದು, ಆರ್ ಸಿಬಿ ಬೌಲರ್ ಉಮೇಶ್ ಯಾದವ್ ಬೌಲಿಂಗ್ ನಲ್ಲಿ 111 ಮೀಟರ್ ದೂರ ಸಿಕ್ಸರ್ ಸಿಡಿಸಿದ್ದಾರೆ. 2019ರ ಐಪಿಎಲ್ ನಲ್ಲಿ ಇದು ಅತೀ ದೊಡ್ಡ ಸಿಕ್ಸರ್ ಆಗಿದೆ. ಇದುವರೆಗೂ 2019ರ ಟೂರ್ನಿಯಲ್ಲಿ ಧೋನಿ 17 ಸಿಕ್ಸರ್ ಸಿಡಿಸಿದ್ದಾರೆ.

ಕೊಹ್ಲಿ ಹೇಳಿದ್ದೇನು?
ಪಂದ್ಯದ ಬಳಿಕ ಮಾತನಾಡಿದ ಕೊಹ್ಲಿ, ಅಂತಿಮ ಎಸೆತವರೆಗೂ ಕಾಡಿದ ಧೋನಿ ನಮ್ಮನ್ನು ಭಯ ಪಡುವಂತೆ ಮಾಡಿದ್ದರು. ಅಂತಿಮ ಎಸೆತದವರೆಗೂ ಹೋರಾಟ ನಡೆಸಿದ ಕಾರಣದಿಂದ ಜಯ ಲಭಿಸಿತು. ಬೆಂಗಳೂರು ಪಿಚ್‍ನಲ್ಲಿ 160 ರನ್ ಗಳೊಂದಿಗೆ ಪಂದ್ಯವನ್ನ ಕಾಪಾಡಿಕೊಳ್ಳುವುದು ಕಷ್ಟಸಾಧ್ಯವಾಗಿತ್ತು ಎಂದು ಅಭಿಪ್ರಾಯಪಟ್ಟರು.

ಕೊನೆಯ ಓವರ್ ಹೀಗಿತ್ತು:
ಕೊನೆಯ 6 ಎಸೆತದಲ್ಲಿ ಚೆನ್ನೈ ತಂಡ 26 ರನ್ ಗಳಿಸಬೇಕಿತ್ತು. ಉಮೇಶ್ ಯಾದವ್ ಎಸೆದ ಮೊದಲ ಎಸೆತವನ್ನು ಧೋನಿ ಬೌಂಡರಿಗೆ ಅಟ್ಟಿದರೆ ನಂತರದ ಎರಡು ಎಸೆತಗಳನ್ನು ಸಿಕ್ಸರ್‍ಗೆ ಅಟ್ಟಿದರು. ನಾಲ್ಕನೇಯ ಎಸೆತದಲ್ಲಿ 2 ರನ್ ಓಡಿದ ಧೋನಿ 5ನೇ ಎಸೆತದಲ್ಲಿ ಸಿಕ್ಸರ್ ಸಿಡಿಸಿದರು. ಕೊನೆಯ ಎಸೆತದಲ್ಲಿ ಎರಡು ಬೇಕಿತ್ತು. ಧೋನಿ ಸ್ಟ್ರೈಕ್ ನಲ್ಲಿದ್ದ ಕಾರಣ ಚೆನ್ನೈ ಪಂದ್ಯ ಗೆಲ್ಲುತ್ತದೆ ಎನ್ನುವ ನಿರೀಕ್ಷೆ ಇತ್ತು. ಆದರೆ ಕೊನೆಯ ಎಸೆತ ಧೋನಿ ಬ್ಯಾಟಿಗೆ ಸಿಗದೇ ಬಾಲ್ ಕೀಪರ್ ಪಾರ್ಥಿವ್ ಪಟೇಲ್ ಕೈಗೆ ಸಿಕ್ಕಿತು. ಆದರೂ ಒಂದು ರನ್ ಓಡಲು ಪ್ರಯತ್ನಿಸುತ್ತಿದ್ದಾಗ ಪಾರ್ಥಿವ್ ಪಟೇಲ್ ಶಾರ್ದೂಲ್ ಠಾಕೂರ್ ಅವರನ್ನು ರನೌಟ್ ಮಾಡಿದರು. ಈ ಮೂಲಕ ಬೆಂಗಳೂರು ತಂಡ 1 ರನ್‍ನಿಂದ ಪಂದ್ಯವನ್ನು ರೋಚಕವಾಗಿ ಗೆದ್ದುಕೊಂಡಿತು.

Comments

Leave a Reply

Your email address will not be published. Required fields are marked *