ಶಿವಮೊಗ್ಗದಲ್ಲಿ ಆರಂಭವಾಗಿದೆ ಗುಪ್ತ್ ಗುಪ್ತ್ ಪ್ಲಾನಿಂಗ್ಸ್!

ಶಿವಮೊಗ್ಗ: ಲೋಕಸಭೆಯ 2ನೇ ಹಂತದ ಮತದಾನಕ್ಕೆ ಇನ್ನು ಎರಡೇ ದಿನ ಬಾಕಿಯಿದ್ದು, ಶಿವಮೊಗ್ಗದಲ್ಲಿ ಇಂದು ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ. ಆದರೆ ದೋಸ್ತಿ ಮತ್ತು ಬಿಜೆಪಿ, ನಿಗದಿಗೂ ಮುನ್ನವೇ ಬಹಿರಂಗ ಪ್ರಚಾರ ಅಂತ್ಯಗೊಳಿಸಿ ಗುಪ್ತ್ ಗುಪ್ತ್ ಪ್ಲಾನಿಂಗ್‍ನಲ್ಲಿ ಬ್ಯುಸಿಯಾಗಿವೆ.

ಬಿ.ಎಸ್ ಯಡಿಯೂರಪ್ಪ ಭದ್ರಕೋಟೆಯಲ್ಲಿ ಮಗನನ್ನೇ ಸೋಲಿಸಲು ದೋಸ್ತಿಗಳು ಎಲ್ಲಾ ಸರ್ಕಸ್ ಮಾಡುತ್ತಿದ್ದಾರೆ. ಹೀಗಾಗಿ ಡಿಕೆ ಬ್ರದರ್ಸ್, ಸಚಿವರು, ಶಾಸಕರು ಸೇರಿದಂತೆ 24ಕ್ಕೂ ಹೆಚ್ಚು ಮಂದಿ ದಿಗ್ಗಜರು ಕ್ಷೇತ್ರದ 8 ವಿಧಾನಸಭೆ ಕ್ಷೇತ್ರಗಳನ್ನು ಆವರಿಸಿಕೊಂಡಿದ್ದಾರೆ.

ಅಷ್ಟೇ ಅಲ್ಲದೆ 500ಕ್ಕೂ ಹೆಚ್ಚು ಮಂದಿ ವಿಶ್ವಾಸಾರ್ಹ ನಾಯಕರನ್ನು ಮಂಡ್ಯ, ಕನಕಪುರದಿಂದ ಕರೆಸಿಕೊಂಡು ರಣತಂತ್ರ ಹೆಣೆದಿದ್ದಾರೆ. ಇದರಿಂದಾಗಿ ನಗರದ ಎಲ್ಲಾ ಲಾಡ್ಜ್ ಗಳು ಫುಲ್ ಆಗೋಗಿವೆ. ಸಿಎಂ ಕುಮಾರಸ್ವಾಮಿ ಇಂದು ಕ್ಷೇತ್ರದಲ್ಲೇ ಇರಲಿದ್ದು, ಯಾವುದೇ ಸಭೆ, ರೋಡ್ ಶೋ, ಸಮಾರಂಭ ಆಯೋಜನೆ ಮಾಡಿಲ್ಲ. ಈ ನಡುವೆ ಬಿಜೆಪಿ ಸಹ ಯಾವುದೇ ಬಹಿರಂಗ ಸಭೆ, ಸಮಾರಂಭ ಆಯೋಜಿಸಿಲ್ಲ.

ಶೀತಲ ಸಮರ:
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಡುವೆ ಶೀತಲ ಸಮರ ನಡೆಯುತ್ತಿದೆಯೇ ಎಂಬ ಅನುಮಾನ ಸೃಷ್ಠಿಯಾಗಿದೆ. ಏಕೆಂದರೆ, ಭದ್ರಾವತಿಯಲ್ಲಿ ಆಯೋಜಿಸಿದ್ದ ಅಮಿತ್ ಶಾ ರೋಡ್ ಶೋಗೆ ಬಿ.ಎಸ್.ವೈ ಗೈರಾಗಿದ್ದರು. ಈ ರೋಡ್ ಶೋನಲ್ಲಿ ಈಶ್ವರಪ್ಪ ಇನ್ನಿತರ ನಾಯಕರು ಪಾಲ್ಗೊಂಡಿದ್ದರು.

ಇದೇ ವೇಳೆಯಲ್ಲಿ ತೀರ್ಥಹಳ್ಳಿಯಲ್ಲಿ ಆಯೋಜಿಸಿದ್ದ ಎಸ್.ಎಂ.ಕೃಷ್ಣ ಅವರ ಬಹಿರಂಗ ಸಭೆಯಲ್ಲಿ ಯಡಿಯೂರಪ್ಪ ಪಾಲ್ಗೊಂಡಿದ್ದರು. ಭದ್ರಾವತಿ ರೋಡ್ ಶೋ ಮುಗಿಸಿ ಅಮಿತ್ ಶಾ ಹೊರಟರು. ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಜಿಲ್ಲೆಗೆ ಆಗಮಿಸಿದ್ದರೂ ರಾಜ್ಯಾಧ್ಯಕ್ಷರು ಅವರನ್ನು ಭೇಟಿ ಮಾಡಲಿಲ್ಲ. ಅಲ್ಲದೆ ತಮ್ಮ ಮಗನ ಕ್ಷೇತ್ರಕ್ಕೆ ಪ್ರಚಾರಕ್ಕೆ ಬಂದರೂ ಅವರ ಜೊತೆ ವೇದಿಕೆ ಹಂಚಿಕೊಳ್ಳಲಿಲ್ಲ. ಇದು ಅಮಿತ್ ಶಾ ಹಾಗೂ ಬಿಎಸ್‍ವೈ ನಡುವೆ ನಿರ್ಮಾಣ ಆಗುತ್ತಿರುವ ಕಂದಕ ಎಂದೇ ಬಿಜೆಪಿ ಮೂಲಗಳು ಬಣ್ಣಿಸುತ್ತಿವೆ.

Comments

Leave a Reply

Your email address will not be published. Required fields are marked *