ವಿಂಗ್‍ಕಮಾಂಡರ್ ಅಭಿನಂದನ್ ಹೆಸರು ‘ವೀರ ಚಕ್ರ’ ಪ್ರಶಸ್ತಿಗೆ ಶಿಫಾರಸ್ಸು

ನವದೆಹಲಿ: ಭಾರತೀಯ ವಾಯು ಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಅವರ ಹೆಸರನ್ನು ಸೇನೆ ‘ವೀರ ಚಕ್ರ’ ಪ್ರಶಸ್ತಿಗೆ ಶಿಫಾರಸ್ಸು ಮಾಡಲು ಚಿಂತನೆ ನಡೆಸಲಾಗಿದೆ ಎಂಬ ಮಾಹಿತಿ ಲಭಿಸಿದೆ.

ಯುದ್ಧದ ಸಮಯದಲ್ಲಿ ನೀಡುವ ಸೇನೆಯ 3ನೇ ಅತ್ಯುನ್ನತ ಪ್ರಶಸ್ತಿ ಇದಾಗಿದ್ದು, ಯುದ್ಧಕಾಲದಲ್ಲಿ ತೋರುವ ಅಪ್ರತಿಮ ಸಾಹಸಕ್ಕೆ ಯೋಧರಿಗೆ ಪರಮವೀರ ಚಕ್ರ, ಮಾಹಾವೀರ ಚಕ್ರ, ವೀರ ಚಕ್ರ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತದೆ. ಬಾಲಕೋಟ್ ದಾಳಿಯಲ್ಲಿ ಕಾರ್ಯನಿರ್ವಹಿಸಿದ್ದ ಮಿಗ್ ಪೈಲಟ್ ಗಳಿಗೂ ಕೂಡ ‘ವಾಯು ಸೇನಾ ಪದಕ’ ನೀಡಲು ಸೇನೆ ನಿರ್ಧರಿಸಿದೆ ಎಂಬ ಮಾಹಿತಿ ಲಭಿಸಿದೆ.

ಪಾಕಿಸ್ತಾನದ ಎಫ್ 16 ಯುದ್ಧ ವಿಮಾನಗಳು ಭಾರತ ಗಡಿ ಪ್ರವೇಶ ಮಾಡಿ ದಾಳಿ ನಡೆಸಲು ಮುಂದಾಗಿತ್ತು. ಈ ವೇಳೆ ಅಭಿನಂದನ್ ಪಾಕ್ ಯುದ್ಧ ವಿಮಾನಗಳನ್ನು ಹಿಮ್ಮೆಟ್ಟಿಸಿದ್ದರು. ಇದಕ್ಕೂ ಮುನ್ನ ಭಾರತ ಸೇನೆ ಪಾಕಿಸ್ತಾನ ಬಾಲಕೋಟ್ ಮೇಲೆ ದಾಳಿ ನಡೆಸಿ ಉಗ್ರರ ನೆಲಗಳನ್ನು ಧ್ವಂಸ ಮಾಡಿತ್ತು.

ಅಭಿನಂದನ್ ವರ್ಗಾವಣೆ: ಇತ್ತ ಅಭಿನಂದನ್ ವರ್ಧಮಾನ್ ಅವರಿಗೆ ಭಾರತೀಯ ವಾಯು ಸೇನೆಯ ಶ್ರೀನಗರ ವಾಯುನೆಲೆಯಿಂದ ವರ್ಗಾವಣೆಯಾಗಿದ್ದು, ದೇಶದ ಮತ್ತೊಂದು ಪ್ರಮುಖ ವಾಯುನೆಲೆಯಾದ ಪಶ್ಚಿಮ ವಲಯಕ್ಕೆ ಅವರನ್ನು ನಿಯೋಜಿಸಲಾಗಿದೆ. ಇದು ಪಾಕಿಸ್ತಾನದ ಗಡಿಯಲ್ಲಿ ಪ್ರಮುಖ ವಾಯುನೆಲೆಯಾಗಿದೆ.

ಜಮ್ಮು ಕಾಶ್ಮೀರದ ಶ್ರೀನಗರದ ವಾಯುನೆಲೆಯಲ್ಲಿ ಅವರ ಭದ್ರತೆಯ ಕುರಿತು ವ್ಯಕ್ತವಾದ ಆತಂಕದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಮಾಹಿತಿ ಲಭಿಸಿದೆ. ಅಲ್ಲದೇ ಶೀಘ್ರದಲ್ಲೇ ಅಭಿನಂದನ್ ಅವರು ವಿಮಾನದ ಕಾಕ್‍ಪಿಟ್ ಏರಲು ಸಿದ್ಧರಾಗಿದ್ದು, ಈ ಕುರಿತ ಸಾಧ್ಯತೆಗಳು ಹೆಚ್ಚಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

Comments

Leave a Reply

Your email address will not be published. Required fields are marked *