ಬೆಳೆ ಕಾಯಲು ಹೋದ ಪೋಷಕರು – ಮನೆಗೆ ನುಗ್ಗಿದ ಐವರು ಕಾಮುಕರು

– ಮನೆ ಕಿಟಕಿಯಿಂದ ಹಾರಿದ ಸಂತ್ರಸ್ತೆ ಸಹೋದರಿ

ರಾಯ್ಪುರ್: 15 ವರ್ಷದ ಬಾಲಕಿಯನ್ನು ಐವರು ಕಾಮುಕರು ಸೇರಿಕೊಂಡು ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಘಟನೆ ಛತ್ತೀಸ್‍ಗಢ ರಾಯ್ಗಢ ಜಿಲ್ಲೆಯಲ್ಲಿ ನಡೆದಿದೆ.

ಈ ಘಟನೆ ಬುಧವಾರ ರಾತ್ರಿ ಘರ್ಘೋಡಾ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರಲ್ಲಿ ನಡೆದಿದೆ. ಆರೋಪಿಗಳನ್ನು ಗೋಚರನ್ ರಥಿಯಾ (26), ಸಂಜಯ್ ರಥಿಯಾ (19), ಮಾಧವ ರಥಿಯಾ (21), ಸುಗನ್ ರಥಿಯಾ (21) ಮತ್ತು ನೂತನ್ ರಥಿಯಾ(19) ಎಂದು ಗುರುತಿಸಲಾಗಿದೆ. ಆರೋಪಿಗಳು ಸಂತ್ರಸ್ತೆಯ ಮನೆಗೆ ನುಗ್ಗಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸ್ ಅಧೀಕ್ಷಕ ರಾಜೇಶ್ ಕುಮಾರ್ ಅಗರ್‍ವಾಲ್ ತಿಳಿಸಿದ್ದಾರೆ.

ಸಂತ್ರಸ್ತೆ ಪೋಷಕರು ಮಕ್ಕಳನ್ನು ಮನೆಯಲ್ಲಿ ಬಿಟ್ಟು ತಮ್ಮ ತೋಟಕ್ಕೆ ತೆರಳಿ ಬೆಳೆಗಳನ್ನು ಕಾವಲು ಕಾಯುತ್ತಿದ್ದರು. ಇದೇ ವೇಳೆ ಆರೋಪಿಗಳು ಏಕಾಏಕಿ ಅವರ ಮನೆಗೆ ನುಗ್ಗಿ ದರೋಡೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಐವರು ಕಾಮುಕರು ಸೇರಿಕೊಂಡು 15 ವರ್ಷದ ಬಾಲಕಿಯನ್ನು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಆಗ ಮನೆಯಲ್ಲಿದ್ದ ಸಂತ್ರಸ್ತೆಯ ಸಹೋದರಿ ಕಿಟಕಿ ಮೂಲಕ ಮನೆಯಿಂದ ಹಾರಿ ಓಡಿ ಹೋಗಿ ಘಟನೆಯ ಬಗ್ಗೆ ತನ್ನ ಪೋಷಕರಿಗೆ ತಿಳಿಸಿದ್ದಾಳೆ.

ಮಾಹಿತಿ ತಿಳಿದ ತಕ್ಷಣ ಪೋಷಕರು ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ. ಪೋಷಕರ ದೂರಿನ ಆಧಾರದ ಮೇರೆಗೆ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 376ಡಿ (ಗ್ಯಾಂಗ್ ರೇಪ್) ಮತ್ತು ಪೋಕ್ಸೋ ಕಾಯ್ದೆ ಅಡಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಅಗರ್‍ವಾಲ್ ತಿಳಿಸಿದ್ದಾರೆ.

ಸದ್ಯಕ್ಕೆ ಐವರು ಆರೋಪಿಗಳನ್ನು ಬಂಧಿಸಿದ್ದು, ಸ್ಥಳೀಯ ನ್ಯಾಯಾಲಯದಲ್ಲಿ ಶುಕ್ರವಾರ ಹಾಜರು ಪಡಿಸಲಾಗಿತ್ತು. ಅವರನ್ನು ನ್ಯಾಯಾಲಯ 14 ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದೆ.

Comments

Leave a Reply

Your email address will not be published. Required fields are marked *