ಸಾರ್ವಜನಿಕ ಸಮಾರಂಭದಲ್ಲಿ ಹಾರ್ದಿಕ್ ಪಟೇಲ್‍ಗೆ ಕಪಾಳಮೋಕ್ಷ

ಗಾಂಧಿನಗರ: ಗುಜರಾತ್ ಸ್ಟಾರ್ ಪ್ರಚಾರಕ, ಕಾಂಗ್ರೆಸ್ ಪಕ್ಷದ ನಾಯಕ ಹಾರ್ದಿಕ್ ಪಟೇಲ್‍ಗೆ ವ್ಯಕ್ತಿಯೊರ್ವ ಸಾರ್ವಜನಿಕ ಸಮಾರಂಭದಲ್ಲಿ ಕಪಾಳಮೊಕ್ಷ ಮಾಡಿರುವ ಘಟನೆ ಸುರೇಂದ್ರ ನಗರ್ ಜಿಲ್ಲೆಯಲ್ಲಿ ನಡೆದಿದೆ.

ಹಾರ್ದಿಕ್ ಪಟೇಲ್ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯನ್ನು ತರುಣ್ ಗಜ್ಜಿರ್ ಎಂದು ಗುರುತಿಸಲಾಗಿದ್ದು, ಪಟೇಲ್ ಸಾರ್ವಜನಿಕರ ಸಮಾರಂಭದ ಮೇಲೆ ಭಾಷಣ ಮಾಡುತ್ತಿದ್ದ ವೇಳೆ ಘಟನೆ ನಡೆದಿದೆ. ಏಕಾಏಕಿ ವೇದಿಕೆಯನ್ನು ಹತ್ತಿದ್ದ ತರುಣ್ ನೇರ ಹಾರ್ದಿಕ್ ಪಟೇಲ್ ಬಳಿ ತೆರಳಿ ಹಲ್ಲೆ ನಡೆಸಿದ್ದಾನೆ.

ಹಾರ್ದಿಕ್ ಮೇಲೆ ಹಲ್ಲೆ ನಡೆಯುತ್ತಿದಂತೆ ಎಚ್ಚೆತ್ತ ಕಾರ್ಯಕರ್ತರು ಕೂಡಲೇ ವೇದಿಕೆ ಮೇಲೆ ಆಗಮಿಸಿ ಆತನನ್ನು ಹಿಡಿದು ಥಳಿಸಿದ್ದಾರೆ. ಬಳಿಕ ಪೊಲೀಸರ ವಶಕ್ಕೆ ಒಪ್ಪಿಸಿ ದೂರು ನೀಡಿದ್ದಾರೆ. ವ್ಯಕ್ತಿಯ ವೇದಿಕೆಗೆ ಬಂದು ಹಲ್ಲೆ ನಡೆಸುತ್ತಿದಂತೆ ಹಾರ್ದಿಕ್ ಕ್ಷಣಕಾಲ ಶಾಕ್‍ಗೆ ಗುರಿಯಾದಂತೆ ಕಂಡು ಬಂತು.

ಇತ್ತ ಪೊಲೀಸರು ತರುಣ್‍ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ತರುಣ್, ಪಾಟೀದರ್ ಸಮುದಾಯದ ಮೀಸಲಾತಿ ಹೋರಾಟ ನಡೆಯುವ ವೇಳೆ ನನ್ನ ಪತ್ನಿ ಗರ್ಭಿಣಿಯಾಗಿದ್ದಳು. ಆಸ್ಪತ್ರೆಗೆ ದಾಖಲಿಸಿದ್ದು ಕೂಡ ಬಂದ್ ನಡೆದಿದ್ದ ಕಾರಣ ಔಷಧಿಗಳು ಲಭ್ಯವಾಗದೇ ಸಮಸ್ಯೆ ಎದುರಿಸಿದ್ದೆ. ಅಲ್ಲದೇ ಪತ್ನಿ ಮಗುವಿಗೆ ಜನ್ಮ ನೀಡಿದ ಬಳಿಕವೂ ಆದೇ ಸಮಸ್ಯೆ ಮುಂದುವರಿದಿತ್ತು. ಅಂದೇ ಈತನಿಗೆ ಸೂಕ್ತ ಬುದ್ಧಿ ಕಲಿಸಲು ನಿರ್ಧರಿಸಿ ಈ ಕೃತ್ಯ ನಡೆಸಿದ್ದಾಗಿ ತಿಳಿಸಿದ್ದಾನೆ.

ಇತ್ತ ಗುರುವಾರದಂದು ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿ ವೇಳೆ ಪಕ್ಷದ ವಕ್ತಾರ ಜಿವಿಎಲ್ ನರಸಿಂಹ ರಾವ್ ಅವರಿಗೆ ವ್ಯಕ್ತಿಯೊಬ್ಬ ಶೂ ಎಸೆದಿದ್ದ ಘಟನೆ ನಡೆದಿತ್ತು. ಮಾಲೆಂಗಾವ್ ಸ್ಫೋಟ ಪ್ರಕರಣದ ಆರೋಪಿ ಸಾಧ್ವಿ ಪ್ರಜ್ಞಾ ಸಿಂಗ್ ಅವರು ಬಿಜೆಪಿಗೆ ಸೇರ್ಪಡೆಯಾಗಿ ಭೋಪಾಲ್‍ನಿಂದ ಸ್ಪರ್ಧೆ ನಡೆಸುವ ವಿಚಾರ ಸಂಬಂಧ ಜಿವಿಎಲ್ ರಾವ್ ಸುದ್ದಿಗೋಷ್ಠಿ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿತ್ತು.

ಮಾರ್ಚ್ ತಿಂಗಳಿನಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದ ಹಾರ್ದಿಕ್ ಪಟೇಲ್ 2015ರಲ್ಲಿ ನಡೆದ ಪಾಟೀದಾರ್ ಮೀಸಲಾತಿ ಹೋರಾಟದ ಮೂಲಕ ಮುನ್ನೆಲೆಗೆ ಬಂದಿದ್ದರು.

Comments

Leave a Reply

Your email address will not be published. Required fields are marked *