ಯೋಗಿ ಮೇಲೆ ಏಕೆ ಅನುಕಂಪ: ಚುನಾವಣಾ ಆಯೋಗಕ್ಕೆ ಮಾಯಾವತಿ ಪ್ರಶ್ನೆ

ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಚುನಾವಣಾ ಆಯೋಗ ವಿಧಿಸಿರುವ ಪ್ರಚಾರ ನಿಷೇಧ ಆದೇಶವನ್ನು ಉಲ್ಲಂಘಿಸಿದ್ದಾರೆ ಎಂದು ಬಹುಜನ ಸಮಾಜ ಪಕ್ಷದ (ಬಿಎಸ್‍ಪಿ) ನಾಯಕಿ ಮಾಯಾವತಿ ಆರೋಪಿಸಿದ್ದಾರೆ. ಆದರೆ ಯೋಗಿ ಆದಿತ್ಯನಾಥ್ ಅವರ ಮಾಧ್ಯಮ ಸಲಹೆಗಾರರು ಮಾಯಾವತಿ ಆರೋಪವನ್ನು ತಳ್ಳಿಹಾಕಿದ್ದಾರೆ.

ಮಾಯಾವತಿ ಅವರು ಸರಣಿ ಟ್ವೀಟ್‍ಗಳ ಬಿಜೆಪಿ ಹಾಗೂ ಚುನಾವಣಾ ಆಯೋಗದ ವಿರುದ್ಧ ಅಸಮಾಧಾನವನ್ನು ಹೊರಹಾಕಿದ್ದಾರೆ. ಯೋಗಿ ಆದಿತ್ಯನಾಥ್ ಅವರು ದೇವಸ್ಥಾನಗಳನ್ನು ಭೇಟಿ ಮಾಡುತ್ತಿದ್ದಾರೆ. ದಲಿತರ ಮನೆಗಳಲ್ಲಿ ಆಹಾರವನ್ನು ಸೇವಿಸುವ ಮೂಲಕ ಚುನಾವಣಾ ಆಯೋಗದ ಆದೇಶವನ್ನು ಉಲ್ಲಂಘಿಸಿದ್ದಾರೆ. ಮತದಾರರನ್ನು ಸೆಳೆಯಲು ಮಾಧ್ಯಮ ವೇದಿಕೆಯನ್ನಾಗಿಸಿಕೊಂಡಿದ್ದಾರೆ. ಚುನಾವಣಾ ಆಯೋಗವು ಅವರ ಮೇಲೆ ಯಾಕೆ ಇಷ್ಟು ಅನುಕಂಪ ತೋರುತ್ತಿದೆ ಎಂದು ಪ್ರಶ್ನಿಸಿದ್ದಾರೆ.

ಚುನಾವಣಾ ಆಯೋಗದ ಈ ರೀತಿಯ ತಾರತಮ್ಯವು ಮುಂದುವರಿದರೆ ಮುಕ್ತ ಮತ್ತು ನ್ಯಾಯೋಚಿತವಾಗಲು ಅಸಾಧ್ಯ. ಈ ಸಂದರ್ಭಗಳಲ್ಲಿ ಸಾರ್ವಜನಿಕ ಪರಿಸ್ಥಿತಿ ಹೇಗೆ ಎಂದು ಮಾಯಾವತಿ ಟ್ವೀಟ್ ಮಾಡಿದ್ದಾರೆ.

ಮಾಯಾವತಿ ಅವರ ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಮಾಧ್ಯಮ ಸಲಹೆಗಾರ ಮೃತ್ಯಂಜಯ್ ಕುಮಾರ್ ಅವರು, ಆಮಂತ್ರಣ ಬಂದಿದ್ದರಿಂದ ಯೋಗಿ ಆದಿತ್ಯನಾಥ್ ಹಾಜರಿದ್ದರು ಎಂದು ತಿಳಿಸಿದ್ದಾರೆ.

ಆಮಂತ್ರಣ ನೀಡಿದವರ ಮನೆಯಲ್ಲಿ ಊಟ ಮಾಡುವುದು ಅಥವಾ ಪ್ರಾರ್ಥನೆ ಸಲ್ಲಿಸುವುದು ವೈಯಕ್ತಿಕ ವಿಚಾರ. ಅಷ್ಟೇ ಅಲ್ಲದೆ ದೇವಾಲಯಗಳಿಗೆ ಭೇಟಿ ನೀಡುವುದು ಹೇಗೆ ಚುನಾವಣಾ ಆದೇಶ ಉಲ್ಲಂಘನೆಯಾಗುತ್ತದೆ ಎಂದು ಮೃತ್ಯಂಜಯ್ ಕುಮಾರ್ ಪ್ರಶ್ನಿಸಿದ್ದಾರೆ.

ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಬಿಎಸ್‍ಪಿ ನಾಯಕಿ ಮಯಾವತಿ ಅವರಿಗೆ ಚುನಾವಣಾ ಆಯೋಗವು ಇಬ್ಬರಿಗೂ ಏಪ್ರಿಲ್ 15ರಂದು ನೋಟಿಸ್ ಜಾರಿ ಮಾಡಿತ್ತು. ಈ ಮೂಲಕ ಏಪ್ರಿಲ್ 16ರಿಂದ ಯೋಗಿ ಆದಿತ್ಯನಾಥ್ ಅವರಿಗೆ 72 ಗಂಟೆ ಮತ್ತು ಮಯಾವತಿ ಅವರಿಗೆ 48 ಗಂಟೆಗಳ ಕಾಲ ಬಹಿರಂಗ ಪ್ರಚಾರಕ್ಕೆ ನಿಷೇಧ ಹೇರಿತ್ತು.

ಆದಿತ್ಯನಾಥ್ ಹೇಳಿದ್ದೇನು?
ಉತ್ತರ ಪ್ರದೇಶದ ಮೀರತ್‍ನಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದ್ದ ಯೋಗಿ ಆದಿತ್ಯನಾಥ್ ಅವರು, ಭಾರತೀಯ ಸೈನ್ಯ `ಮೋದಿ ಸೈನ್ಯ’, ಮುಸ್ಲಿಂ ಲೀಗ್ `ವೈರಸ್’ ಎಂದು ಹೇಳಿದ್ದರು. ಅಲ್ಲದೇ ಕಾಂಗ್ರೆಸ್, ಸಮಾಜವಾದಿ ಪಕ್ಷ (ಎಸ್‍ಪಿ) ಹಾಗೂ ಬಹುಜನ ಸಮಾಜ ಪಕ್ಷ (ಬಿಎಸ್‍ಪಿ) ಅಲಿ ಮೇಲೆ ನಂಬಿಕೆ ಹೊಂದಿದ್ದಾರೆ. ಆದರೆ ನಾವು ಭಜರಂಗಬಲಿ ಮೇಲೆ ನಂಬಿಕೆ ಇಟ್ಟುಕೊಂಡಿದ್ದೇವೆ. ಹೀಗಾಗಿ ಅವರು ಅಲಿಯನ್ನು ಹೊಂದಿದ್ದರೆ, ನಾವು ಭಜರಂಗಬಲಿಯನ್ನು ಹೊಂದಿದ್ದೇವೆ ಎಂದಿದ್ದರು.

ಮಯಾವತಿ ಹೇಳಿದ್ದೇನು?
ಯೋಗಿ ಆದಿತ್ಯನಾಥ್ ಅವರ ಹೇಳಿಕೆಗೂ ಕೆಲ ದಿನಗಳ ಮುನ್ನ ಉತ್ತರ ಪ್ರದೇಶದ ದಿಯೋಬಂದ್‍ನಲ್ಲಿ ನಡೆದಿದ್ದ ಸಮಾಜವಾದಿ ಪಕ್ಷ (ಎಸ್‍ಪಿ) ಹಾಗೂ ಬಿಎಸ್‍ಪಿ ಜಂಟಿ ಸಮಾವೇಶದಲ್ಲಿ ಮಾತನಾಡಿದ್ದ ಮಾಯಾವತಿ ಅವರು ಮುಸ್ಲಿಂ ಸಮುದಾಯದ ಬಳಿ ಮತಯಾಚನೆ ಮಾಡಿದ್ದರು. ಈ ವೇಳೆ ಕಾಂಗ್ರೆಸ್ಸಿಗೆ ಮುಸ್ಲಿಮರು ಮತ ಹಾಕಬೇಡಿ. ಬಿಜೆಪಿಗೆ ಅನುಕೂಲ ಕಲ್ಪಿಸಲು ಕಾಂಗ್ರೆಸ್ ಕೆಲವೆಡೆ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಮುಸ್ಲಿಮರು ಕಾಂಗ್ರೆಸ್‍ಗೆ ಮತ ಹಾಕಿದರೆ ಮತ ವಿಭಜನೆಯಾಗಿ ಬಿಜೆಪಿಗೆ ಅನುಕೂಲವಾಗಲಿದೆ ಎಂದು ಮನವಿ ಮಾಡಿಕೊಂಡಿದ್ದರು. ಅಲ್ಲದೇ ಕೇಂದ್ರದ ಬಿಜೆಪಿ ಸರ್ಕಾರವು ಜನರಲ್ಲಿ ದ್ವೇಷದ ಬೀಜ ಬಿತ್ತುತ್ತಿದೆ. ಹೀಗಾಗಿ ಈ ಬಾರಿ ಬಿಜೆಪಿ ಅಧಿಕಾರ ಕಳೆದುಕೊಳ್ಳಲಿದೆ. ಕಾಂಗ್ರೆಸ್‍ಗೆ ಮತ ನೀಡುವ ಮೂಲಕ ಮುಸ್ಲಿಮರು ಪರೋಕ್ಷವಾಗಿ ಬಿಜೆಪಿ ಪರವಾಗಿ ನಿಲ್ಲದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದ್ದರು.

ಮಯಾವತಿ ಅವರ ಈ ಹೇಳಿಕೆಗೆ ತಿರುಗೇಟು ನೀಡಲು ಸಿಎಂ ಯೋಗಿ ಆದಿತ್ಯನಾಥ್ ಅವರು ಅಲಿ, ಭಜರಂಗ ಬಲಿ ಹೇಳಿಕೆಯನ್ನು ನೀಡಿದ್ದರು.

Comments

Leave a Reply

Your email address will not be published. Required fields are marked *