ಸಿಎಂ ಎಚ್‍ಡಿಕೆ ವಿರುದ್ಧ ಕಮಿಷನ್ ಬಾಂಬ್- ಚುನಾವಣೆ ಬಳಿಕ ಅಧಿಕಾರಕ್ಕೆ ಬಂದು ತನಿಖೆ: ಶ್ರೀರಾಮುಲು

ಗದಗ: ಲೋಕಸಭಾ ಚುನಾವಣೆಯಲ್ಲಿ ನಿಖಿಲ್, ಪ್ರಜ್ವಲ್ ರೇವಣ್ಣರನ್ನ ಗೆಲ್ಲಿಸಿಕೊಳ್ಳಲು ಸಿಎಂ ಕುಮಾರಸ್ವಾಮಿ ಸರ್ಕಾರ ಗುತ್ತಿಗೆದಾರರಿಂದ ಕೋಟಿ ಕೋಟಿ ರೂ. ಕಮಿಷನ್ ಹಣವನ್ನು ಸಂಗ್ರಹ ಮಾಡಿದೆ ಎಂದು ಬಿಜೆಪಿ ಶಾಸಕ ಶ್ರೀರಾಮುಲು ಗಂಭೀರ ಆರೋಪ ಮಾಡಿದ್ದಾರೆ.

ಕ್ಷೇತ್ರದಲ್ಲಿ ಪಕ್ಷದ ಪರ ಪ್ರಚಾರ ನಡೆಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರ ಮಗನನ್ನು ಗೆಲ್ಲಿಸಿಕೊಳ್ಳಲು ಗುತ್ತಿಗೆದಾರರಿಂದ ನೂರಾರು ಕೋಟಿ ರೂ. ಕಮಿಷನ್ ಪಡೆದಿದ್ದಾರೆ. ಇತ್ತ ಪ್ರಜ್ವಲ್, ದೇವೇಗೌಡರನ್ನು ಗೆಲ್ಲಿಸಿಕೊಳ್ಳಲು ಪಿಡಬ್ಲ್ಯೂಡಿ ಗುತ್ತಿಗೆದಾರರಿಂದ ಕಮಿಷನ್ ಪಡೆದು ಭ್ರಷ್ಟಾಚಾರ ನಡೆಸಿದ್ದಾರೆ. ಲೋಕಸಭಾ ಚುನಾವಣೆಯ ಬಳಿಕ ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಲಾಗುವುದು ಎಂದರು.

ಹಲವು ಕಾಮಗಾರಿಗಳು ಇಲಾಖೆಯಲ್ಲಿ ಪೂರ್ಣಗೊಳ್ಳದಿದ್ದರು ಕೂಡ ಹಣ ಬಿಡುಗಡೆ ಮಾಡಿರುವುದು ಇದಕ್ಕೆ ಸಾಕ್ಷಿಯಾಗಿದ್ದು, ಆ ಮೂಲಕ ಕಮಿಷನ್ ಪಡೆದಿದ್ದಾರೆ ಎಂದರು. ಇದೇ ವೇಳೆ ಸುಮಲತಾ ಅವರ ಪರ ಮಾತನಾಡಿ, ಪಕ್ಷ ತೀರ್ಮಾನ ತೆಗೆದುಕೊಂಡಿದೆ. ಮೋದಿ ಅವರು ಕೂಡ ಬೆಂಬಲ ನೀಡಿದ್ದಾರೆ. ಮಂಡ್ಯ ಜನ ಸ್ವಾಭಿಮಾನಿ ಜನಗಳಾಗಿದ್ದು, ಸುಮಲತಾ ಚುನಾವಣೆಯಲ್ಲಿ ಗೆಲ್ಲುತ್ತಾರೆ ಎಂದರು.

ಮೈತ್ರಿಯಲ್ಲಿ ಹೊಂದಾಣಿಕೆ ಸರಿ ಇಲ್ಲ. ಮೈತ್ರಿ ಸೋಲುಂಟಾದರೆ ನೀವು ಹೊಣೆ ಎಂದು ಜೆಡಿಎಸ್ ಪಕ್ಷದ ಮಂತ್ರಿಗಳು ಬಹಿರಂಗವಾಗಿ ಕಾಂಗ್ರೆಸ್ ವಿರುದ್ಧ ಹೇಳಿಕೆ ನೀಡಿದ್ದಾರೆ. ನಿಖಿಲ್ ಸೋತು ಕುಮಾರಸ್ವಾಮಿ ರಾಜೀನಾಮೆ ನೀಡುತ್ತಾರೆ. ಪರಿಣಾಮ ಚುನಾವಣೆ ಬಳಿಕ ಸರ್ಕಾರ ಉರುಳಿ ಹೋಗಲಿದೆ ಎಂದು ಭವಿಷ್ಯ ನುಡಿದರು. ಅಲ್ಲದೇ ನಮ್ಮ ಪಕ್ಷ ರಾಜ್ಯದಲ್ಲಿ 22 ಸ್ಥಾನಗಳಲ್ಲಿ ಗೆಲುವು ಪಡೆಯಲಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

Comments

Leave a Reply

Your email address will not be published. Required fields are marked *