ಹಣದ ಹೊಳೆಯಲ್ಲ, ಹೆಂಡದ ಹೊಳೆ – ಬಳ್ಳಾರಿಯಲ್ಲಿ 1.95 ಕೋಟಿ ಮೌಲ್ಯದ ಮದ್ಯ ವಶ!

ಬಳ್ಳಾರಿ: ಗಣಿನಾಡು ಬಳ್ಳಾರಿಯಲ್ಲಿ ಇದುವರೆಗೂ ನಡೆದ ಎಲ್ಲ ಚುನಾವಣೆಗಳಲ್ಲಿ ಕುರುಡು ಕಾಂಚಾಣದ್ದೇ ಸದ್ದು. 500, ಸಾವಿರ ರೂಪಾಯಿಯ ನೋಟುಗಳು ಹರಿದಾಡುತ್ತಿದ್ದ ಕಣದಲ್ಲಿ ಈಗ ಹೆಂಡದ ಹೊಳೆಯೇ ಹರಿಯುತ್ತಿದೆ.

ಜಿಲ್ಲೆಯಲ್ಲಿ ಯಾವುದೇ ಚುನಾವಣೆ ನಡೆದರೂ ಇಲ್ಲಿ ಹಣದ ಹೊಳೆಯನ್ನೆ ಹರಿಸಲಾಗುತ್ತದೆ ಎನ್ನುವ ಆರೋಪವಿದೆ. ಆದರೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹಣಕ್ಕಿಂತ ಮದ್ಯವೇ ಸಾಕಷ್ಟು ಸುದ್ದಿಯಾಗುತ್ತಿದೆ. ಯಾಕೆಂದರೆ ಚುನಾವಣೆಗೆ ಇನ್ನೊಂದು ವಾರ ಬಾಕಿಯಿರುವಾಗಲೇ ವಶಪಡಿಸಿಕೊಂಡ ಮದ್ಯದ ಪ್ರಮಾಣ ನೋಡಿದರೆ ಹೆಂಡದ ಹೊಳೆ ಎಷ್ಟೊಂದು ಪ್ರಮಾಣದಲ್ಲಿದೆ ಅನ್ನೋದು ಇದೀಗ ಬಯಲಾಗಿದೆ.

ನೀತಿ ಸಂಹಿತೆ ಜಾರಿಯಾದ ದಿನದಿಂದ ಇದುವರೆಗೂ ಬಳ್ಳಾರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರೋಬ್ಬರಿ 1,95,89,137 ಕೋಟಿ ಮೌಲ್ಯದ 33,841 ಲೀಟರ್ ಮದ್ಯವನ್ನು ಜಪ್ತಿ ಮಾಡಲಾಗಿದೆ. ಕಳೆದ ಚುನಾವಣೆಗಳಿಗೆ ಹೋಲಿಸಿದರೆ ಇದೂ ದುಪ್ಪಟ್ಟು ಪ್ರಮಾಣವಾಗಿದೆ. ಅಕ್ರಮವಾಗಿ ಮದ್ಯ ಸಾಗಾಟ ಮಾಡಿ ಮತದಾರರಿಗೆ ಹಚ್ಚಲು ಮುಂದಾದ ಸಾಕಷ್ಟು ಪ್ರಮಾಣದ ಮದ್ಯವನ್ನ ಪೊಲೀಸರು, ಅಬಕಾರಿ ಅಧಿಕಾರಿಗಳು ಹಾಗೂ ಚುನಾವಣಾಧಿಕಾರಿಗಳು ಸೀಜ್ ಮಾಡಿ ಪ್ರಕರಣ ದಾಖಲಿಸಿಕೊಂಡು ಅಕ್ರಮಕ್ಕೆ ಬ್ರೇಕ್ ಹಾಕಿದ್ದಾರೆ.

ಜಿಲ್ಲೆಯಲ್ಲಿ 1,11,35,694 ಕೋಟಿ ಮೌಲ್ಯದ ವಸ್ತುಗಳು ಜಪ್ತಿ ಮಾಡಲಾಗಿದೆ. ಮದ್ಯದ ಪ್ರಮಾಣವೇ ಹೆಚ್ಚಾಗಿರುವುದರಿಂದ ಅಕ್ರಮ ಮದ್ಯ ಸಾಗಾಟದ ಮೇಲೆ ಚುನಾವಣಾಧಿಕಾರಿಗಳು ಹದ್ದಿನ ಕಣ್ಣನ್ನು ಇರಿಸಿ ಹೆಂಡದ ಹೊಳೆ ತಪ್ಪಿಸಲು ಪ್ರಯತ್ನ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *