ಇಮ್ರಾನ್ ಖಾನ್ ಹೇಳಿಕೆ ಹಿಂದೆ ಕಾಂಗ್ರೆಸ್ ಕೈವಾಡ – ನಿರ್ಮಲಾ ಸೀತಾರಾಮನ್

ನವದೆಹಲಿ: ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆಯ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅರೋಪಿಸಿದ್ದಾರೆ.

ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ನಿರ್ಮಲಾ ಸೀತಾರಾಮನ್ ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಭಾರತದಲ್ಲಿ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯದ್ರೆ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಬಹುದು ಎಂದು ಪಾಕ್ ಪ್ರಧಾನಿ ಹೇಳುತ್ತಾರೆ. 2019ರ ಚುನಾವಣೆಯನ್ನು ಗೆಲ್ಲಲು ಕಾಂಗ್ರೆಸ್ ಪಾಕಿಸ್ತಾನದ ಸಹಾಯವನ್ನು ಪಡೆಯುತ್ತಿದೆ. ಹೀಗಾಗಿ ಇಮ್ರಾನ್ ಖಾನ್ ಅವರಿಂದ ಈ ರೀತಿಯ ಹೇಳಿಕೆ ಹೇಳಿಸುತ್ತಿದೆ ಎಂದರು.

ಪಾಕ್ ವಿದೇಶ ಮಂತ್ರಿ ಮಹಮೂದ್ ಖುರೇಶಿ, ಏಪ್ರಿಲ್ 16ರಿಂದ 20ರೊಳಗೆ ಭಾರತ ದಾಳಿ ನಡೆಸುತ್ತೆ ಎಂಬ ಹೇಳಿಕೆಯನ್ನು ನೀಡುತ್ತಾರೆ. ಖುರೇಶಿ ಅವರಿಗೆ ಈ ದಿನಾಂಕವನ್ನು ಯಾರು ನೀಡಿದರೂ ಎಂಬುವುದು ನನಗೆ ಗೊತ್ತಿಲ್ಲ. ಚುನಾವಣೆ ವೇಳೆಯಲ್ಲಿ ಈ ರೀತಿಯ ಕಾಲ್ಪನಿಕ ಹೇಳಿಕೆಗಳು ಬರುತ್ತಿರುತ್ತಿವೆ ಎಂದು ವ್ಯಂಗ್ಯ ಮಾಡಿದರು.

ಮಹಿಳಾ ಅಭ್ಯರ್ಥಿಗಳ ವಿರುದ್ಧ ರಾಜಕೀಯ ನಾಯಕರು ನೀಡುತ್ತಿರುವ ಕೀಳುಮಟ್ಟದ ಮಾತುಗಳಿಗೆ ಪ್ರತಿಕ್ರಿಯಿಸಿದ ನಿರ್ಮಲಾ ಸೀತಾರಾಮನ್, ಚುನಾವಣೆಯಲ್ಲಿ ಅಭಿವೃದ್ಧಿಯ ವಿಷಯಗಳ ಕುರಿತಾಗಿ ಚರ್ಚಿಸಬೇಕು. ಅಭ್ಯರ್ಥಿಯ ಖಾಸಗಿ ವಿಚಾರಗಳನ್ನು ಪ್ರಸ್ತಾಪಿಸಬಾರದು. ರಾಜಕೀಯಕ್ಕೆ ವಿಚಾರಗಳಲ್ಲಿ ಆರೋಪಗಳನ್ನು ಮಾಡುವ ವೇಳೆ ಮತ್ತೊಬ್ಬರ ವ್ಯಕ್ತಿತ್ವಕ್ಕೆ ಧಕ್ಕೆಯಾಗದಂತೆ ಮಾತನಾಡಬೇಕು. ಪ್ರತಿ ಮಾತುಗಳನ್ನು ಯೋಚಿಸಿ ಮಾತನಾಡಬೇಕಾಗುತ್ತದೆ. ಮುಂದಿನ ಪೀಳಿಗೆಗೆ ಈ ರೀತಿಯ ಹೇಳಿಕೆಗಳನ್ನು ಕೊಡುಗೆ ನೀಡಿದಂತೆ ಆಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ಇಮ್ರಾನ್ ಖಾನ್ ಹೇಳಿದ್ದೇನು?
ಲೋಕಸಭಾ ಚುನಾವಣೆ ಬಳಿಕ ಭಾರತದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ ಪಾಕಿಸ್ತಾನದ ಜೊತೆಗಿರುವ ಕಾಶ್ಮೀರದ ಸಮಸ್ಯೆ ಬಗೆಹರಿಸಲು ಸ್ವಲ್ಪ ಭಯಪಡುವ ಸಾಧ್ಯತೆಯಿದೆ. ಒಂದು ವೇಳೆ ಬಲಪಂಥೀಯ ಪಕ್ಷವಾದ ಬಿಜೆಪಿಯು ಅಧಿಕಾರಕ್ಕೆ ಬಂದರೆ ಸಮಸ್ಯೆಗೆ ಕೆಲವು ಪರಿಹಾರಗಳನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ಇಮ್ರಾನ್ ಖಾನ್ ಅಭಿಪ್ರಾಯ ವ್ಯಕ್ತಪಡಿಸಿದ್ದರು.

Comments

Leave a Reply

Your email address will not be published. Required fields are marked *