ಧೋನಿ ಸಹ ಮನುಷ್ಯರೇ ಅಲ್ವಾ? – ಎಂಎಸ್‍ಡಿ ಪರ ಬ್ಯಾಟ್ ಬೀಸಿದ ಗಂಗೂಲಿ

ಕೋಲ್ಕತ್ತಾ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮೈದಾನದಲ್ಲಿ ಅಂಪೈರ್ ಗಳೊಂದಿಗೆ ವಾಗ್ವಾದ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ, ಎಲ್ಲರೂ ಮನುಷ್ಯರೇ ಎಂದು ಹೇಳುವ ಮೂಲಕ ಬೆಂಬಲ ನೀಡಿದ್ದಾರೆ.

ಡೆಲ್ಲಿ, ಕೋಲ್ಕತ್ತಾ ಪಂದ್ಯದ ಬಳಿಕ ಪ್ರತಿಕ್ರಿಯೆ ನೀಡಿದ್ದ ಗಂಗೂಲಿ, ಪ್ರತಿಯೊಬ್ಬರು ಮನುಷ್ಯರೇ. ಅವರ ಸ್ಪಧಾತ್ಮಕತೆ ಏನು? ಎಂಬುದು ಮಾತ್ರ ಇಲ್ಲಿ ಗಮನಾರ್ಹವಾಗಿರುತ್ತದೆ. ಕೆಲ ಸಂದರ್ಭಗಳಲ್ಲಿ ಭಾವನಾತ್ಮಕ ಪರಿಸ್ಥಿತಿಗೆ ಸಿಲುಕಿದಾಗ ಇಂತಹ ಘಟನೆಗಳು ನಡೆಯುತ್ತದೆ ಎಂದಿದ್ದಾರೆ. ಇದೇ ವೇಳೆ ಡೆಲ್ಲಿ ತಂಡದ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಗಂಗೂಲಿ, ತಂಡ ಕೋಲ್ಕತ್ತಾ ವಿರುದ್ಧ ತೋರಿದ ಪ್ರದರ್ಶನ ತೃಪ್ತಿ ತಂದಿದೆ ಎಂದು ಹೇಳಿದ್ದಾರೆ.

ಇತ್ತ ಧೋನಿ ಮೈದಾನಕ್ಕೆ ಪ್ರವೇಶ ಮಾಡಿದ್ದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಹಲವು ಹಿರಿಯ ಆಟಗಾರರು ಧೋನಿ ನಡೆ ವಿರುದ್ಧ ಕಿಡಿಕಾರಿದ್ದರು. ಧೋನಿ ಕ್ರಿಕೆಟಿನಲ್ಲಿ ತನ್ನ ಬಲ ಎಷ್ಟಿದೆ ಎಂದು ತೋರಿಸಿದ್ದಾರೆ. ಇಂತಹ ವರ್ತನೆ ತೋರಿದ್ದರೂ ಕೂಡ ಪಂದ್ಯದ ಶೇ..50 ರಷ್ಟು ಸಂಭಾವನೆಯನ್ನು ಮಾತ್ರ ದಂಡವಾಗಿ ವಿಧಿಸಿ ಬಿಸಿಸಿಐ ಉದಾರತೆಯನ್ನು ತೋರಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಲವರು ಟೀಕೆ ಮಾಡಿದ್ದಾರೆ.

ಏನಿದು ವಿವಾದ?
ಐಪಿಎಲ್ 12ನೇ ಆವೃತ್ತಿಯ ಭಾಗವಾಗಿ ಗುರುವಾರ ಚೆನ್ನೈ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವೆ ನಡೆದ ಪಂದ್ಯದಲ್ಲಿ ಘಟನೆ ನಡೆದಿತ್ತು. ಪಂದ್ಯದ ಅಂತಿಮ ಓವರಿನಲ್ಲಿ ಅಂಪೈರ್ ನೋಬಾಲ್ ನೀಡಿ ಬಳಿಕ ತಮ್ಮ ನಿರ್ಧಾರದಿಂದ ಹಿಂದಕ್ಕೆ ಸರಿದಿದ್ದರು. ಈ ವೇಳೆ ಬೌಂಡರಿ ಲೈನ್ ಬಳಿ ಕುಳಿತಿದ್ದ ಧೋನಿ ಮೈದಾನಕ್ಕೆ ಆಗಮಿಸಿ ಅಂಪೈರ್ ಜೊತೆ ಚರ್ಚೆ ನಡೆಸಿದ್ದರು. ಬ್ಯಾಟಿಂಗ್ ನಡೆಸುತ್ತಿದ್ದ ಜಡೇಜಾ ಕೂಡ ಅಂಪೈರ್ ರೊಂದಿಗೆ ಮಾತುಕತೆ ನಡೆಸಿದ್ದರು. ಯಾವುದೇ ಸಮಯದಲ್ಲೂ ತಾಳ್ಮೆ ಕಳೆದುಕೊಳ್ಳದೇ ಇರುತ್ತಿದ್ದ ಧೋನಿ ಮಾತ್ರ ಐಪಿಎಲ್ ನಿಯಮಗಳನ್ನು ಮೀರಿ ಮೈದಾನಕ್ಕೆ ನುಗ್ಗಿದ್ದು ವಿಶೇಷವಾಗಿತ್ತು.

Comments

Leave a Reply

Your email address will not be published. Required fields are marked *