ಕಾರು ಚಾಲಕನನ್ನು ಎತ್ತಿಕಟ್ಟಿ ಅಂಬೇಡ್ಕರನ್ನು ಸೋಲಿಸಿದ್ದು ಇದೇ ಕಾಂಗ್ರೆಸ್ : ಪ್ರೀತಂ ಗೌಡ

ಹಾಸನ: ಒಬ್ಬ ಕಾರು ಚಾಲಕನನ್ನು ಎತ್ತಿಕಟ್ಟುವ ಮೂಲಕ ಬಿ.ಆರ್.ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಇದೇ ಕಾಂಗ್ರೆಸ್ ಮತ್ತು ಘಟಬಂಧನ್ ಎಂದು ಹೇಳಿ ಬಿಜೆಪಿ ಶಾಸಕ ಪ್ರೀತಂ ಗೌಡ ಅವರು ಕೈ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಶಾಸಕರು, ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ಅವರ ಅಂತ್ಯಸಂಸ್ಕಾರಕ್ಕೆ ಕಾಂಗ್ರೆಸ್ಸಿಗರು ಆರು ಬೈ ಮೂರು ಜಾಗವನ್ನೂ ಸಹ ನೀಡಲಿಲ್ಲ. ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರೂ ಮೃತಪಟ್ಟಾಗ ಸಮಾಧಿ ನಿರ್ಮಾಣಕ್ಕೆ 11 ಎಕರೆ ನೀಡಿದರು. ಇಂದಿರಾ ಗಾಂಧಿ ಅಂತ್ಯ ಸಂಸ್ಕಾರವನ್ನು 16 ಎಕರೆಯಲ್ಲಿ ಮಾಡಿದರು. ಆದರೆ ಅಂಬೇಡ್ಕರ್ ಅವರು ಮೃತಪಟ್ಟಾಗ ಮುಂಬೈನ ಕಡಲ ತೀರದಲ್ಲಿ ಅಂತ್ಯ ಸಂಸ್ಕಾರ ಮಾಡುವಂತೆ ಮಾಡಿದ್ದು ಇದೇ ಕಾಂಗ್ರೆಸ್ ಎಂದು ದೂರಿದರು.

ಕಾಂಗ್ರೆಸ್‍ನವರು ದಲಿತರನ್ನು ಕೇವಲ ವೋಟ್ ಬ್ಯಾಂಕ್ ಆಗಿ ಬಳಸಿಕೊಂಡರೇ ಹೊರತು ಯಾವತ್ತೂ ಅಧಿಕಾರ ನೀಡಲಿಲ್ಲ. ಹತ್ತು ವರ್ಷಗಳ ಯುಪಿಎ ಅಧಿಕಾರದಲ್ಲಿದ್ದರೂ ಒಬ್ಬ ದಲಿತರಿಗೆ ರಾಷ್ಟ್ರಪತಿ ಸ್ಥಾನ ಮಾಡಲಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಹಲವು ಆಯ್ಕೆಗಳಿದ್ದರೂ ಸಹ ದಲಿತ ನಾಯಕ ರಾಮನಾಥ್ ಕೋವಿಂದ್ ಅವರನ್ನು ರಾಷ್ಟ್ರಪತಿಯಾಗಿ ಆಯ್ಕೆ ಮಾಡಿದರು ಎಂದು ತಿಳಿಸಿದರು.

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲವೂ ಗಾಂಧಿ ಕುಟುಂಬಕ್ಕೆ ಇರಲಿ ಎನ್ನುತ್ತಾರೆ. ಹಾಸನದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಅಪ್ಪ ಮಕ್ಕಳು, ಮೊಮ್ಮಕ್ಕಳು ಎಲ್ಲವೂ ನಮಗೆ ಇರಲಿ ಅಂತ ಹೇಳುತ್ತಾರೆ. ಇವರು ದಲಿತರಿಗೆ ಯಾವುದೇ ಅಧಿಕಾರ ಕೊಡಲ್ಲ ಎಂದು ವಾಗ್ದಾಳಿ ನಡೆಸಿದರು.

Comments

Leave a Reply

Your email address will not be published. Required fields are marked *