ಅಭಿವೃದ್ಧಿಯೇ ನಮ್ಮ ಮಂತ್ರ, ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನ ರದ್ದು – ಬಿಜೆಪಿ ಪ್ರಣಾಳಿಕೆ ಬಿಡುಗಡೆ

ನವದೆಹಲಿ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿರುವ ಭಾರತೀಯ ಸಂವಿಧಾನದ 370ನೇ ವಿಧಿಯನ್ನು ರದ್ದು ಪಡಿಸಲಾಗುವುದು ಎಂದು ಹೇಳಿದೆ.

45 ಪುಟಗಳ ‘ಸಂಕಲ್ಪ ಪತ್ರ’ ಹೆಸರಿನ ಪ್ರಣಾಳಿಕೆಯಲ್ಲಿ ರಾಷ್ಟ್ರೀಯ ಭದ್ರತೆಗೆ ಮೊದಲ ಸ್ಥಾನವನ್ನು ನೀಡಲಾಗಿದೆ. 2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುತ್ತೇವೆ. ರಾಮ ಮಂದಿರವನ್ನು ನಿರ್ಮಾಣ ಮಾಡುತ್ತೇವೆ ಎಂದು ಬಿಜೆಪಿ ತಿಳಿಸಿದೆ.

ಭಯೋತ್ಪಾದನೆ ನಿರ್ಮೂಲನೆ ನಮ್ಮ ಪ್ರಮುಖ ಗುರಿಯಾಗಿದ್ದು, ಸ್ವದೇಶಿ ಶಸ್ತ್ರಾಸ್ತ್ರಗಳ ನಿರ್ಮಾಣಕ್ಕೆ ಒತ್ತು ನೀಡುತ್ತೇವೆ. ಏಕರೂಪದ ನಾಗರಿಕ ಸಂಹಿತೆ, ನಾಗರಿಕತ್ವ ತಿದ್ದುಪಡಿ ಮಸೂದೆ, ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷ ಪೂರ್ಣಗೊಳ್ಳುವ ಹಿನ್ನೆಲೆಯಲ್ಲಿ 2022ಕ್ಕೆ ಒಂದು ಕುಟುಂಬಕ್ಕೆ ಒಂದು ಮನೆಯನ್ನು ನಿರ್ಮಿಸಿ ಕೊಡುತ್ತೇವೆ ಎಂದು ಬಿಜೆಪಿ ಪ್ರಣಾಳಿಕೆಯಲ್ಲಿ ತಿಳಿಸಿದೆ.

ಗೃಹ ಸಚಿವ ರಾಜನಾಥ್ ಸಿಂಗ್ ಮಾತನಾಡಿ, ಅಭಿವೃದ್ಧಿಯೇ ನಮ್ಮ ಮಂತ್ರವಾಗಿದ್ದು, ಕಳೆದ ಬಾರಿ ನೀಡಿದ ಭರವಸೆಗಳನ್ನು ಸರ್ಕಾರ ಈಡೇರಿಸಿದೆ. ನಾವು ಗಟ್ಟಿ ಮತ್ತು ಸುಭದ್ರವಾದ ಸರ್ಕಾರವನ್ನು ನೀಡಲಿದ್ದೇವೆ. ಈ ಸಂಕಲ್ಪ ಪತ್ರದ ಎಲ್ಲ ಆಶ್ವಾಸನೆಗಳನ್ನು ಈಡೇರಿಸಲಿದ್ದೇವೆ. ಹೀಗಾಗಿ ನಮಗೆ ಮತ್ತೊಮ್ಮೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿಕೊಂಡರು.

ಪ್ರಣಾಳಿಕೆಯಲ್ಲಿರುವ ಪ್ರಮುಖ ಅಂಶಗಳು:
– 1 ಲಕ್ಷ ರೂ. ವರೆಗಿನ ರೈತರ ಸಾಲಕ್ಕೆ ಶೂನ್ಯ ಬಡ್ಡಿ ದರ
– ಪ್ರಧಾನ ಮಂತ್ರಿ ಕೃಷಿ ಸಿಂಚಯ್ ಹೆಸರಿನಲ್ಲಿ ನೀರಾವರಿ ಯೋಜನೆಗೆ ಆಧ್ಯತೆ
– 60 ವರ್ಷ ಮೇಲ್ಪಟ್ಟ ಸಣ್ಣ ಮತ್ತು ಮಧ್ಯಮ ರೈತರಿಗೆ ಪಿಂಚಣಿ
– ಉನ್ನತ ಶಿಕ್ಷಣ ಮೂಲಭೂತ ಸೌಕರ್ಯಕ್ಕೆ 1 ಲಕ್ಷ ಕೋಟಿ ನೆರವು
– ಉನ್ನತ ಮ್ಯಾನೇಜ್‍ಮೆಂಟ್ ಶಿಕ್ಷಣ ಸಂಸ್ಥೆಯಲ್ಲಿ ಸೀಟ್ ಗಳ ಸಂಖ್ಯೆ ಹೆಚ್ಚಳ.

 

– ಒಂದು ಕುಟುಂಬಕ್ಕೆ ಒಂದು ಮನೆ ನಿರ್ಮಾಣ
– ಗ್ರಾಮೀಣ ಭಾಗದ ಎಲ್ಲ ಕುಟುಂಬಕ್ಕೆ ಗ್ಯಾಸ್ ಸಂಪರ್ಕ
– ಗ್ರಾಮೀಣ ಭಾಗದಲ್ಲಿ ಶೇ.100 ವಿದ್ಯುತ್ ಸಂಪರ್ಕ, ಪ್ರತಿ ಮನೆಗೆ ಶೌಚಾಲಯ
– ರಾಷ್ಟ್ರೀಯ ಹೆದ್ದಾರಿ ಉದ್ದವನ್ನು ದ್ವಿಗುಣ
– ಅಕ್ರಮವಾಗಿ ಈಶಾನ್ಯ ರಾಜ್ಯಗಳಲ್ಲಿ ನುಸುಳುವ ವ್ಯಕ್ತಿಗಳ ವಿರುದ್ಧ ಕ್ರಮ

– 2022 ರೊಳಗೆ ರೈತರ ಆದಾಯ ದ್ವಿಗುಣಕ್ಕೆ ಗುರಿ
– ಕೃಷಿ ಗ್ರಾಮಿಣಾಭಿವೃದ್ಧಿಗೆ 25 ಲಕ್ಷ ಕೋಟಿ ಮೀಸಲು
– ಬೇನಾಮಿ ಆಸ್ತಿ ಕಡಿವಾಣಕ್ಕೆ ಕ್ರಮ
– ರಾಷ್ಟ್ರಿಯ ವ್ಯಾಪಾರಿ ಆಯೋಗ ರಚನೆಗೆ ಕ್ರಮ
– ವಿಶ್ವದ ಟಾಪ್ 3 ದೇಶಗಳ ಪಟ್ಟಿಯಲ್ಲಿ ಸೇರ್ಪಡೆಗೆ ಸಂಕಲ್ಪ
– 75 ಹೊಸ ಮೆಡಿಕಲ್ ಕಾಲೇಜ್

Comments

Leave a Reply

Your email address will not be published. Required fields are marked *