ಮಧ್ಯಪ್ರದೇಶ ಸಿಎಂ ಆಪ್ತನಿಗೆ ಐಟಿ ಶಾಕ್ – 9 ಕೋಟಿ ಪತ್ತೆ

ಭೋಪಾಲ್: ಕರ್ನಾಟಕ ಹಾಗೂ ತಮಿಳುನಾಡು ಬೆನ್ನಲ್ಲೇ ಈಗ ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲನಾಥ್ ಅವರ ಆಪ್ತರಿಗೂ ಆದಾಯ ತೆರಿಗೆ (ಐಟಿ) ಇಲಾಖೆ ಅಧಿಕಾರಿಗಳು ದಾಳಿ ಬಿಸಿ ತಟ್ಟಿದೆ.

ಐಟಿ ಇಲಾಖೆ ಅಧಿಕಾರಿಗಳು ಕಮಲನಾಥ್ ಅವರ ವಿಶೇಷಾಧಿಕಾರಿ ಪ್ರವೀಣ್ ಕಕ್ಕರ್ ಹಾಗೂ ಸಹಾಯಕರಾದ ರಾಜೇಂದ್ರ ಕುಮಾರ್ ಮಿಗಲಾನಿ, ಪ್ರತಿಕ್ ಜೋಷಿ ನಿವಾಸದ ಮೇಲೆ ಇಂದು ಬೆಳ್ಳಂಬೆಳಗ್ಗೆ ದಾಳಿ ಮಾಡಿದ್ದಾರೆ.

ಕಮಲ್‍ನಾಥ್ ಆಪ್ತರು ಹವಾಲಾ ಹಣ ವರ್ಗಾವಣೆ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಐಟಿಗೆ ಲಭ್ಯವಾಗಿತ್ತು. ಹೀಗಾಗಿ ಇಂದೋರ್ ನಲ್ಲಿರುವ ಪ್ರವೀಣ್ ಕಕ್ಕರ್ ನಿವಾಸದ ಮೇಲೆ 15 ಐಟಿ ಅಧಿಕಾರಿ ಜನ ಅಧಿಕಾರಿಗಳ ತಂಡ ಬೆಳಗ್ಗೆ 3 ಗಂಟೆಗೆ ದಾಳಿ ಮಾಡಿದೆ. ಅಷ್ಟೇ ಅಲ್ಲದೆ ದೆಹಲಿಯಲ್ಲಿರುವ ರಾಜೇಂದ್ರ ಕುಮಾರ್ ಮಿಗಲಾನಿ ನಿವಾಸ ಸೇರಿದಂತೆ ಇಂದೋರ್, ಭೋಪಾಲ್, ಗೋವಾದಲ್ಲಿ 50 ಸ್ಥಳಗಳಲ್ಲಿ 300ಕ್ಕೂ ಹೆಚ್ಚು ಐಟಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಭೋಪಾಲಿನ ಪ್ರತೀಕ್ ಜೋಷಿ ಎಂಬವರ ಮನೆಯಲ್ಲಿ ಐಟಿ ದಾಳಿ ವೇಳೆ 9 ಕೋಟಿ ರೂ. ನಗದು ಪತ್ತೆಯಾಗಿದೆ ಎಂದು ಐಟಿ ಮೂಲಗಳನ್ನು ಆಧಾರಿಸಿ ಮಾಧ್ಯಮಗಳು ವರದಿ ಮಾಡಿವೆ.

ಪ್ರವೀಣ್ ಕಕ್ಕರ್ ಮಾಜಿ ಪೊಲೀಸ್ ಅಧಿಕಾರಿಯಾಗಿದ್ದು ಮಾಜಿ ಸಿಎಂ, ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಆಪ್ತರೆಂದು ಹೇಳಲಾಗಿದೆ. 2004ರಲ್ಲಿ ಪೊಲೀಸ್ ಇಲಾಖೆಯಿಂದ ಸ್ವಯಂಪ್ರೇರಿತ ನಿವೃತ್ತಿಯನ್ನು ಪಡೆದುಕೊಂಡಿದ್ದರು. ಪ್ರವೀಣ್ ಕಕ್ಕರ್ ವಿರುದ್ಧ ನಕಲಿ ಎನ್‍ಕೌಂಟರ್ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಮಂಡ್ಯ, ಹಾಸನದಲ್ಲಿ ಸಿಎಂ ಕುಮಾರಸ್ವಾಮಿ ಆಪ್ತ ಅಧಿಕಾರಿಗಳ ಮೇಲೆ ಐಟಿ ಅಧಿಕಾರಿಗಳು ಕಳೆದ ವಾರ ದಾಳಿ ಮಾಡಿದ್ದರು. ಚುನಾವಣೆ ಸಮಯದಲ್ಲಿ ಉದ್ದೇಶಪೂರ್ವಕವಾಗಿ ಕೇಂದ್ರ ಬಿಜೆಪಿ ಸರ್ಕಾರ ಐಟಿ ದಾಳಿ ಮಾಡಿಸಿದೆ ಎಂದು ಮೈತ್ರಿ ನಾಯಕರು ಆರೋಪಿಸಿದ್ದರು. ಜೊತೆಗೆ ಬೆಂಗಳೂರಿನಲ್ಲಿರುವ ಆದಾಯ ತೆರಿಗೆ ಇಲಾಖೆ ಮುಂದೆ ಪ್ರತಿಭಟನೆ ಮಾಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಸಿಎಂ ಕುಮಾರಸ್ವಾಮಿ ಸಂಬಂಧಿ ಪರಮೇಶ್ ಅವರ ಮೇಲೆ ಐಟಿ ದಾಳಿ ನಡೆದಿತ್ತು. ಪರಮೇಶ್ ಅವರ ಲಾಕರ್ ನಲ್ಲಿ 6.50 ಕೋಟಿ ರೂ. ಪತ್ತೆಯಾಗಿದ್ದು, ವಿಚಾರಣೆ ನಡೆಯುತ್ತಿದೆ.

ತಮಿಳುನಾಡಿನ ವೆಲ್ಲೋರ್ ಜಿಲ್ಲೆಯ ಕಟ್ಟಾಡಿಯಲ್ಲಿರುವ ಡಿಎಂಕೆ ಖಜಾಂಚಿ ದೊರೈ ಮುರುಗನ್ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಜೊತೆಗೆ ಸೇರಿ ಚುನಾವಣಾ ಅಧಿಕಾರಿಗಳು ಮಾರ್ಚ್ 30ರಂದು ಬೆಳಗ್ಗೆ ದಾಳಿ ನಡೆಸಿದ್ದರು. ದೊರೈ ಮುರುಗನ್ ನಿವಾಸದಲ್ಲಿ ಅಕ್ರಮ ಹಣದ ವಹಿವಾಟು ನಡೆಯುತ್ತಿದೆ ಎನ್ನುವ ಖಚಿತ ಮಾಹಿತಿ ಚುನಾವಣಾ ಆಯೋಗಕ್ಕೆ ಸಿಕ್ಕಿತ್ತು. ಹೀಗಾಗಿ ಐಟಿ ಹಾಗೂ ಚುನಾವಣಾ ಆಯೋಗದ ಅಧಿಕಾರಿಗಳು ದಾಳಿ ಮಾಡಿದ್ದರು.

Comments

Leave a Reply

Your email address will not be published. Required fields are marked *