ಗೆಳೆಯರ ನಡುವಿನ ಗಲಾಟೆ ಪ್ರಕರಣ – ರಾಗಿಣಿ ಪ್ರತಿಕ್ರಿಯೆ

ಬೆಂಗಳೂರು: ಖಾಸಗಿ ಹೋಟೆಲ್ ನಲ್ಲಿ ನಡೆದ ಗೆಳೆಯರ ನಡುವಿನ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಅಂದು ನಾನು ಸ್ನೇಹಿತರ ಜೊತೆ ಹೋಟೆಲಿನಲ್ಲೇ ಇದ್ದೆ ಎಂದು ತಿಳಿಸಿದ್ದಾರೆ.

ಹಳೆ ವೈಷ್ಯಮ್ಯಕ್ಕೆ ಸಂಬಂಧಿಸಿದಂತೆ ರವಿ ಹಾಗೂ ಶಿವಕುಮಾರ್ ಮಧ್ಯೆ ಗಲಾಟೆ ನಡೆದಿತ್ತು. ಆಗ ನಾನು ಸ್ನೇಹಿತರೊಂದಿಗೆ ಅಲ್ಲೇ ಊಟ ಮಾಡುತ್ತಿದ್ದೆ. ಅವರಿಬ್ಬರ ಜಗಳದ ಮಧ್ಯೆ ನನ್ನ ಪಾತ್ರ ಏನೂ ಇಲ್ಲ. ಗಲಾಟೆ ಆದ ಬಳಿಕ ನಾನು ಅಲ್ಲಿಂದ ಹೊರಟು ಹೋದೆ. ಈ ಘಟನೆ ಬಗ್ಗೆ ನಾನು ಪೋಲೀಸರಿಗೆ ಹೇಳಿಕೆ ನೀಡಿದ್ದೇನೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.

ಇತ್ತೀಚೆಗೆ ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಟಿ ರಾಗಿಣಿ ಅವರ ಗೆಳೆಯರಾದ ರವಿ ಹಾಗೂ ಶಿವಕುಮಾರ್ ಮಧ್ಯೆ ಗಲಾಟೆ ನಡೆದ್ದಿತ್ತು. ಆ ಬಳಿಕ ಘಟನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದರು.

ಏನಿದು ಪ್ರಕರಣ?:
ಬೆಂಗಳೂರಿನ ಖಾಸಗಿ ಹೋಟೆಲ್ ರಿಟ್ಜ್ ಕಾರ್ಲ್ ಟನ್ ನಲ್ಲಿ ಉದ್ಯಮಿ ಶಿವಪ್ರಕಾಶ್ ಚಿಪ್ಪಿ ಹಾಗೂ ಆರ್ ಟಿಒ ಅಧಿಕಾರಿ ರವಿ ಕಿತ್ತಾಡಿಕೊಂಡಿದ್ದರು. ಮಾರ್ಚ್ 16 ಶನಿವಾರ ರಾತ್ರಿ ಹೋಟೆಲ್ ನಲ್ಲಿ ಶಿವಪ್ರಕಾಶ್ ಪಾರ್ಟಿ ಮಾಡುತ್ತಿದ್ದರು. ಈ ವೇಳೆ ನಟಿ, ತಮ್ಮ ಗೆಳೆಯ ರವಿಯೊಂದಿಗೆ ಹೋಟೆಲ್‍ಗೆ ತೆರಳಿದ್ದರು. ಇದನ್ನು ಕಂಡ ಶಿವಪ್ರಕಾಶ್, ರವಿಯೊಂದಿಗೆ ಕಿರಿಕ್ ಮಾಡಿಕೊಂಡಿದ್ದರು. ಇಬ್ಬರ ನಡುವೆ ಆರಂಭವಾದ ಜಗಳ ತಾರಕಕ್ಕೇರಿ ಬಳಿಕ ಬಿಯರ್ ಬಾಟಲಿಯಿಂದ ಪರಸ್ಪರ ಬಡಿದಾಡಿಕೊಂಡಿದ್ದರು.

ಘಟನೆಯಿಂದ ಗಾಯಗೊಂಡ ಬಳಿಕ ರವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ನಂತರ ಅಶೋಕ ನಗರ ಪೊಲೀಸ್ ಠಾಣೆಗೆ ತೆರಳಿ ಲಿಖಿತ ದೂರು ನೀಡಿದ್ದರು. ರವಿ ನೀಡಿದ ದೂರಿನ ಅನ್ವಯ ಪೊಲೀಸರು ಎಫ್‍ಐಆರ್ ದಾಖಲಿಸಿ ಶಿವಪ್ರಕಾಶ್ ರನ್ನು ವಿಚಾರಣೆಗೆ ಒಳಪಡಿಸಿರುವುದಾಗಿ ಪೊಲೀಸ್ ಮೂಲಗಳಿಂದ ತಿಳಿದುಬಂದಿತ್ತು. ಇವರಿಬ್ಬರು ರಾಗಿಣಿ ವಿಚಾರದಲ್ಲಿ ಕಿತ್ತಾಡಿಕೊಂಡಿದ್ದರು ಎಂದು ವರದಿಯಾಗಿತ್ತು. ಆದರೆ ಈಗ ರಾಗಿಣಿ ಈ ವಿಚಾರಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಪ್ರತಿಕ್ರಿಯಿಸಿದ್ದರು.

Comments

Leave a Reply

Your email address will not be published. Required fields are marked *