ಸಿಎಂ ಸಂಬಂಧಿ ಲಾಕರಿನಲ್ಲಿ ಕಂತೆ ಕಂತೆ ಹಣ – ಕೋಟಿಗಟ್ಟಲೇ ಹಣ ಕಂಡು ಐಟಿ ಅಧಿಕಾರಿಗಳು ಶಾಕ್

ಬೆಂಗಳೂರು: ಸಿಎಂ ಕುಮಾರಸ್ವಾಮಿ ಅವರ ಸಂಬಂಧಿ ಪರಮೇಶ್ ಅವರ ಲಾಕರ್ ನಲ್ಲಿ ಸುಮಾರು 6.50 ಕೋಟಿ ರೂ. ಹಣ ಪತ್ತೆಯಾಗಿದ್ದು, ಈ ಹಣ ಚುನಾವಣೆಗಾಗಿ ಹಂಚಿಕೆ ಮಾಡಲು ಸಂಗ್ರಹಿಸಿಡಲಾಗಿತ್ತಾ ಎನ್ನುವ ಪ್ರಶ್ನೆ ಎದ್ದಿದೆ.

ಮಾರ್ಚ್ 28 ರಂದು ಶಿವಮೊಗ್ಗದ ಪರಮೇಶ್ ಅವರ ಮನೆ, ಶೋ ರೂಂ ಮೇಲೆ ಐಟಿ ದಾಳಿ ನಡೆಸಲಾಗಿತ್ತು. ಸತತ 20 ಗಂಟೆಗಳ ಸಮಯ 30 ಅಧಿಕಾರಿಗಳ ತಂಡ ಮನೆ ಶೋ ರೂಂನಲ್ಲಿ ಪರಿಶೀಲನೆ ನಡೆಸಿತ್ತು. ಈ ವೇಳೆ ಪತ್ತೆಯಾಗಿದ್ದ ಬ್ಯಾಂಕ್ ಲಾಕರಿನ ವಿವರಣೆ ಪಡೆದು ಐಟಿ ಅಧಿಕಾರಿಗಳು ತನಿಖೆ ನಡೆಸಿದ್ದರು.

ಗುರುವಾರ ಐಟಿ ಅಧಿಕಾರಿಗಳು ರಾಷ್ಟ್ರಿಕೃತ ಬ್ಯಾಂಕಿಗೆ ತೆರಳಿ ಲಾಕರ್ ತೆರೆದ ಸಂದರ್ಭದಲ್ಲಿ ಕವರ್ ಗಳಲ್ಲಿ ತುಂಬಿದ್ದ ಹಣ ಪತ್ತೆಯಾಗಿದೆ. ಭಾರೀ ಹಣವನ್ನು ಕಂಡು ಐಟಿ ಆಧಿಕಾರಿಗಳು ಶಾಕ್ ಆಗಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಬ್ಯಾಂಕ್ ಲಾಕರ್ ಪಡೆದಿರುವ ಬಗ್ಗೆ ದಾಖಲೆ ಸಿಕ್ಕ ಬಳಿಕ ಅಧಿಕಾರಿಗಳ ಲಾಕರ್ ಕೀ ಬಗ್ಗೆ ಪ್ರಶ್ನೆ ಮಾಡಿದ್ದರು. ಈ ವೇಳೆ ಕೀ ಕಳೆದು ಹೋಗಿದ್ದಾಗಿ ಪರಮೇಶ್ವರ್ ತಿಳಿಸಿದ್ದರು ಎನ್ನಲಾಗಿದೆ. ಸದ್ಯ ಹಣವನ್ನು ಜಪ್ತಿ ಮಾಡಿರುವ ಐಟಿ ಇಲಾಖೆ ಸೂಕ್ತ ದಾಖಲೆ ನೀಡುವಂತೆ ನೋಟಿಸ್ ನೀಡಿದೆ.

ಐಟಿ ದಾಳಿ: ರಾಜ್ಯ ಸರ್ಕಾರ ಕಾಮಗಾರಿಗಳು ಪೂರ್ಣಗೊಳ್ಳದೆಯೇ ಹಣ ಬಿಡುಗಡೆ ಮಾಡಿ ಚುನಾವಣೆಗೆ ಹಣ ಸಂಗ್ರಹ ಮಾಡಿದೆ ಎಂಬ ಆರೋಪ ಹೇಳಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ಕೆಲ ಗುತ್ತಿಗೆದಾರರ ಮನೆ, ಕಚೇರಿ, ಕಟ್ಟಡಗಳ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಎಲ್ಲ ಗುತ್ತಿಗೆದಾರರ ಮನೆ ಮೇಲೆ ದಾಳಿ ನಡೆದಾಗ 10 ಕೋಟಿ ರೂ. ನಗದು ವಶಕ್ಕೆ ಪಡೆದಿತ್ತು. ಆ ಬಳಿಕ ಹೆಚ್ಚಿನ ವಿಚಾರಣೆ ವೇಳೆ ನಡೆಸಲಾಗಿದೆ.

Comments

Leave a Reply

Your email address will not be published. Required fields are marked *