ಮುನಿಸು ಮರೆತ್ರಾ ದೇವೇಗೌಡ, ಸಿದ್ದರಾಮಯ್ಯ- ಗುರು, ಶಿಷ್ಯರಿಂದ ಜಂಟಿ ಪ್ರಚಾರ!

ಬೆಂಗಳೂರು: ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರ ನಡುವೆ ದೋಸ್ತಿ ಆದ್ರೂ ಕೆಳಮಟ್ಟದ ಕಾರ್ಯಕರ್ತರಲ್ಲಿ ಒಗ್ಗಟ್ಟು ಮೂಡಿಲ್ಲ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಅದನ್ನ ಸರಿಪಡಿಸಲು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಂಟಿಯಾಗಿ ಪ್ರಚಾರಕ್ಕೆ ಹೋಗಲು ನಿರ್ಧರಿಸಿದ್ದಾರೆ.

ಹೌದು. 28 ಕ್ಷೇತ್ರಗಳಿಗೆ ಗೌಡರು ಹಾಗೂ ಸಿದ್ದರಾಮಯ್ಯ ಜೋಡಿ ಜೊತೆಯಲ್ಲಿ ಸಾಗಲಿದೆ. ಆ ಮೂಲಕ ದಶಕಗಳ ಕಾಲ ಒಬ್ಬರನ್ನೊಬ್ಬರು ದ್ವೇಷಿಸಿದ್ದ ಅವರಿಬ್ಬರೇ ಮೈತ್ರಿ ಸೂತ್ರ ಪಾಲನೆಗೆ ಒಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅವರಿಬ್ಬರು ಒಂದಾಗಿದ್ದಾರೆ ಇನ್ನು ನಮ್ಮದೇನು ಎಂದು ಕಾರ್ಯಕರ್ತರ ಮನವೂ ಈ ಮೂಲಕ ಪರಿವರ್ತನೆ ಆಗಬಹುದು ಎಂಬುದು ದೋಸ್ತಿ ನಾಯಕರ ಲೆಕ್ಕಾಚಾರವಾಗಿದೆ. ಆದ್ದರಿಂದ ಜಂಟಿ ಚುನಾವಣಾ ಪ್ರಚಾರದ ರೂಪುರೇಷೆ ಸಿದ್ಧವಾಗಿದ್ದು ಎಲ್ಲಾ ಕ್ಷೇತ್ರಗಳಲ್ಲೂ ಹಳೆಯ ಗುರು ಶಿಷ್ಯರಾದ ದೇವೇಗೌಡರು ಹಾಗೂ ಸಿದ್ದರಾಮಯ್ಯ ಜೊತೆ ಜೊತೆಯಲ್ಲಿ ಪ್ರಚಾರ ನಡೆಸಲಿದ್ದಾರೆ.

ಹೀಗೆ ಎರಡೂ ಪಕ್ಷದ ಕಾರ್ಯಕರ್ತರಲ್ಲಿ ಒಗ್ಗಟ್ಟು ಮೂಡಿಸಲು ಇಂತಹ ಮಾಸ್ಟರ್ ಸ್ಟ್ರೋಕ್ ಒಂದನ್ನ ದೋಸ್ತಿ ಪಕ್ಷ ಪ್ರಯೋಗಿಸಿದೆ. ಮೈತ್ರಿ ಸೂತ್ರ ಪಾಲನೆಗಾಗಿ ದೇವೇಗೌಡರು ಹಾಗೂ ಸಿದ್ದರಾಮಯ್ಯ ತಮ್ಮ ಹಳೆ ಮುನಿಸು ಮರೆಯಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇನ್ನೊಂದು ಕಡೆ ಸಿಎಂ ಕುಮಾರಸ್ವಾಮಿ ಹಾಗೂ ಡಿಸಿಎಂ ಪರಮೇಶ್ವರ್ ಸಹಾ ಜಂಟಿ ಪ್ರವಾಸ ಮಾಡಿ ಸರ್ಕಾರದ ಸಾಧನೆಯನ್ನ ಜನರ ಮುಂದಿಡಲಿದ್ದಾರೆ. ಸಿಎಂ ,ಡಿಸಿಎಂ ಜಂಟಿ ಪ್ರವಾಸಕ್ಕಿಂತಲೂ ಮಾಜಿ ಪಿಎಂ ಹಾಗೂ ಮಾಜಿ ಸಿಎಂ ಜಂಟಿ ಪ್ರವಾಸವೇ ಈಗ ರಾಜ್ಯ ರಾಜಕಾರಣದ ಬಹುಚರ್ಚಿತ ವಿಷಯವಾಗಿದೆ.

ಎಲ್ಲೆಲ್ಲಿ ಪ್ರಚಾರ:
ಗುರು-ಶಿಷ್ಯರ ಜಂಟಿ ಪ್ರಚಾರಕ್ಕೆ ಮುಹೂರ್ತ ನಿಗದಿಯಾಗಿದ್ದು, 5 ದಿನಗಳಲ್ಲಿ ಸಿದ್ದರಾಮಯ್ಯ ಹಾಗೂ ದೇವೇಗೌಡರಿಂದ ಜೊತೆ ಜೊತೆಯಾಗಿ ಕ್ಯಾಂಪೇನ್ ನಡೆಯಲಿದೆ. ಏಪ್ರಿಲ್ 9 ಮೈಸೂರು, ಏಪ್ರಿಲ್ 10 ತುಮಕೂರು, ಏಪ್ರಿಲ್ 11 ಹಾಸನ, ಏಪ್ರಿಲ್ 12 ಮಂಡ್ಯ, ಏಪ್ರಿಲ್ 13 ಬೆಂಗಳೂರಲ್ಲಿ ಸಮಾವೇಶ ಹಾಗೂ ರೋಡ್ ಶೋ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

Comments

Leave a Reply

Your email address will not be published. Required fields are marked *