ತೇಜಸ್ವಿ ಸೂರ್ಯ ಗೆದ್ದೇ ಗೆಲ್ತಾನೆ – ಕೈ ಶಾಸಕ ಸುಧಾಕರ್ ಭವಿಷ್ಯ

ಚಿಕ್ಕಬಳ್ಳಾಪುರ: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಗೆದ್ದೇ ಗೆಲ್ತಾನೆ ಅಂತ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ.ಕೆ ಸುಧಾಕರ್ ಭವಿಷ್ಯ ನುಡಿದಿದ್ದಾರೆ.

ಚಿಕ್ಕಬಳ್ಳಾಪುರ ತಾಲೂಕು ಮಂಡಿಕಲ್ ಗ್ರಾಮದಲ್ಲಿ ವೀರಪ್ಪಮೊಯ್ಲಿ ಪರ ಚುನಾವಣಾ ಪ್ರಚಾರ ನಡೆಸಲು ಪೂರ್ವ ಭಾವಿಯಾಗಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ಕರೆಯಲಾಗಿತ್ತು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡಿದ ಸುಧಾಕರ್ ಅವರು, ಬಿಜೆಪಿ ಅವರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಒಬ್ಬ ಹುಡುಗನಿಗೆ ಟಿಕೆಟ್ ಕೊಟ್ಟಿದ್ದಾರೆ. ನಾನು ಈ ಮಾತನ್ನು ಹೇಳಬಾರದು ಅದರೂ ಹೇಳುತ್ತಿದ್ದೇನೆ. ಅಲ್ಲಿ ತೇಜಸ್ವಿ ಸೂರ್ಯ ಗೆಲ್ತಾನೆ. ಆದರೆ ಅವನು ಅವನ ಮುಖದಿಂದ ಗೆಲ್ಲಲ್ಲ. ಆ ಕ್ಷೇತ್ರದಲ್ಲಿ ಸೂರ್ಯ ನಿಲ್ಲಿಸಲಿ, ಚಂದ್ರ ನಿಲ್ಲಿಸಲಿ ಬಿಜೆಪಿ ಪಕ್ಷದ ಖದರ್ ನಿಂದ ತೇಜಸ್ವಿ ಸೂರ್ಯ ಗೆಲ್ತಾನೆ ಅಂತ ಅಭಿಪ್ರಾಯ ವ್ಯಕ್ತಪಡಿಸಿದರು.

ಮಂಡಿಕಲ್ ಹೋಬಳಿಯಲ್ಲಿ ಪಕ್ಷ ಸಂಘಟನೆ ವಿಚಾರದಲ್ಲಿ ಕೆಲ ಹಿನ್ನಡೆಯಾಗಿದೆ. ಆದರೆ ಮುಂದಿನ ದಿನಗಳಲ್ಲಿ ನಾನು ಪಕ್ಷ ಸಂಘಟನೆ ಮಾಡುತ್ತೇನೆ. ನೀವು ಎಡಪಕ್ಷಗಳಾದ ಸಿಪಿಐಎಂ ಕಾರ್ಯಕರ್ತರಂತೆ ಇರಬೇಕು. ಅವರು ದುಡ್ಡು ಕೊಡಲಿಲ್ಲ ಅಂದರೂ ಸಾಲ ಮಾಡಿಯಾದರೂ ಪಕ್ಷದ ಕಾರ್ಯಕ್ರಮಗಳಿಗೆ ಭಾಗವಹಿಸುತ್ತಾರೆ. ಉದಾಹರಣೆಗೆ ಬಾಗೇಪಲ್ಲಿಯಲ್ಲಿ ಸರಿಸುಮಾರು 40 ಸಾವಿರ ಮತಗಳು ಏನೇ ಮಾಡಿದರೂ ಸಿಪಿಎಂ ಪಕ್ಷ ಬಿಟ್ಟು ಬರಲ್ಲ. ಹಾಗೇ ಕಾಂಗ್ರೆಸ್ ಕಾರ್ಯಕರ್ತರು ಸಹ ಪಕ್ಷಕ್ಕೆ ನಿಷ್ಠೆಯಿಂದ ಇರಬೇಕು. ಇದು ಮದುವೆ ಕರೆಯೋಲೆ ಅಲ್ಲ. ಮೊಯ್ಲಿಯವರು ಚುನಾವಣೆಗೆ ನಿಂತರೆ ನಮ್ಮ ಮನೆಯಲ್ಲಿ ಮದುವೆ ಅಗ್ತಿಲ್ಲ. ಇದು ನಮ್ಮ ಪಕ್ಷ ನಮ್ಮ ಕುಟುಂಬ ಎನ್ನುವ ಮನೋಭಾವದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡಬೇಕು ಎಂದು ಕರೆ ನೀಡಿದರು.

Comments

Leave a Reply

Your email address will not be published. Required fields are marked *