ದೋಸ್ತಿ ಸಮಾವೇಶಕ್ಕೆ ಆರಂಭದಲ್ಲೇ ವಿಘ್ನ!

– ಸಿದ್ದರಾಮಯ್ಯ ಫೋಟೋವಿಲ್ಲದ ಫ್ಲೆಕ್ಸ್ ಧರೆಗೆ
– ಕೆಲಕಾಲ ಟ್ರಾಫಿಕ್ ಜಾಂ

ಬೆಂಗಳೂರು: ನಗರದ ಹೊರವಲಯ ನೆಲಮಂಗಲ ಸಮೀಪ ಇರೋ ಮಾದಾವರದ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಮೈದಾನದಲ್ಲಿ ದೋಸ್ತಿಗಳು ಜಂಟಿಯಾಗಿ ಬೃಹತ್ ಸಮಾವೇಶ ಆಯೋಜಿಸಿದ್ದು, ಇದೀಗ ಕಾರ್ಯಕ್ರಮಕ್ಕೆ ಮುನ್ನವೇ ವಿಘ್ನವೊಂದು ಎದುರಾಗಿದೆ.

ಹೌದು. ಕಾರ್ಯಕ್ರಮದ ಅಂಗವಾಗಿ ದೋಸ್ತಿ ನಾಯಕರ ಫೊಟೋಗಳಿರುವ ಬೃಹತ್ ಗಾತ್ರದ ಫ್ಲೆಕ್ಸ್ ಗಾಳಿಯಿಂದಾಗಿ ಧರೆಗೆ ಉರುಳಿದೆ. ಸುಮಾರು ಅರ್ಧಗಂಟೆಯಿಂದ ಫ್ಲೆಕ್ಸ್ ರಸ್ತೆಯಲ್ಲಿ ಬಿದ್ದಿದೆ. ಪರಿಣಾಮ ಟ್ರಾಫಿಕ್ ಜಾಮ್ ಉಂಟಾಗಿದ್ದು, ಕೆಲ ಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.

ಸಿದ್ದರಾಮಯ್ಯ ಫೋಟೋ ಇಲ್ಲ:
ಬೃಹತ್ ಸಮಾವೇಶದ ಕುರಿತು ಹಾಕಲಾದ ಬ್ಯಾನರ್, ಫ್ಲೆಕ್ಸ್ ನಲ್ಲಿ ಸಿದ್ದರಾಮಯ್ಯ ಅವರ ಫೋಟೋ ಇಲ್ಲ. ಹೀಗಾಗಿ ಅವರನ್ನು ಕಡೆಗಣಿಸಿದ್ದಾರಾ ಅಥವಾ ಬೇಕಂತಲೇ ಅವರ ಫೋಟೋ ಹಾಕಿಲ್ವಾ ಅನ್ನೋ ಅನುಮಾನ ಮೂಡಿದೆ. ಮಾದಾವರದ ಬಿಐಇಸಿ ಮೈದಾನದಲ್ಲಿ ಹಾಕಿರುವ ಯಾವುದೇ ಫ್ಲೆಕ್ಸ್‍ನಲ್ಲಿ ಸಿದ್ದರಾಮಯ್ಯನವರ ಫೋಟೋ ಕಾಣಿಸುತ್ತಿಲ್ಲ. ಹೀಗಾಗಿ ಈ ಮೂಲಕ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮುಂದೆ ಸಿದ್ದರಾಮಯ್ಯರನ್ನು ಡಮ್ಮಿ ಎಂದು ಬಿಂಬಿಸುವ ಪ್ರಯತ್ನ ನಡೀತಿದ್ಯಾ ಅನ್ನೋ ಪ್ರಶ್ನೆ ಕೂಡ ಕಾಡುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯನ ಭಾವಚಿತ್ರ ಹಾಕದೇ ಇರಲು ಯಾರಾದ್ರೂ ಖಡಕ್ ಸೂಚನೆ ಕೊಟ್ಟಿದ್ದಾರಾ ಅಥವಾ ಕಣ್ತಪ್ಪಿನಿಂದ ಈ ಎಡವಟ್ಟು ಆಗಿದೆಯಾ ಎಂದು ಅಲ್ಲಿನ ಜನಸಾಮಾನ್ಯರು ಮಾತನಾಡಿಕೊಳ್ಳುತ್ತಿದ್ದಾರೆ.

ಒಟ್ಟಿನಲ್ಲಿ ಇಂದು ಸಂಜೆ 4 ಗಂಟೆ ಸುಮಾರಿಗೆ ನಡೆಯುವ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಹಾಗೂ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದು, ಪ್ರಧಾನಿ ಮೋದಿ ವಿರುದ್ಧ ಘರ್ಜಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸುಮಾರು 5 ಲಕ್ಷ ಕಾರ್ಯಕರ್ತರು ಬರುವ ನಿರೀಕ್ಷೆಯಿದೆ.

Comments

Leave a Reply

Your email address will not be published. Required fields are marked *