ಯುವಕರನ್ನೇ ಹೊತ್ತೊಯ್ಯುವ ಪಲ್ಲಕ್ಕಿ – ಮಂಗ್ಳೂರಿನಲ್ಲಿ ದೈವದ ಪವಾಡ

ಮಂಗಳೂರು: ಎಲ್ಲೆಡೆ ದೇವರ ಪಲ್ಲಕ್ಕಿಯನ್ನು ಆಳುಗಳು ಹೊತ್ತೊಯ್ದರೆ, ಮಂಗಳೂರಿನ ಕಿನ್ನಿಗೋಳಿ ಸಮೀಪದ ಅತ್ತೂರಿನಲ್ಲಿ ಪಲ್ಲಕ್ಕಿಯನ್ನು ಹಿಡಿದ 20ಕ್ಕೂ ಅಧಿಕ ಯುವಕರನ್ನು ಪಲ್ಲಕ್ಕಿಯೇ ಹಿಡಿದೆಳೆಯುತ್ತದೆ.

ಇದು ತುಳುನಾಡಿನ ಆರಾಧ್ಯ ದೈವ ಅರಸು ಕುಂಜಿರಾಯ ಉತ್ಸವದ ವೇಳೆ ಕಂಡು ಬರುತ್ತದೆ. ಸಾಮಾನ್ಯವಾಗಿ ಉತ್ಸವದ ವೇಳೆ ದೈವ-ದೇವರುಗಳ ವಿಗ್ರಹವನ್ನು ಪಲ್ಲಕ್ಕಿಯಲ್ಲಿ ಹೊತ್ತೊಯ್ಯಲಾಗುತ್ತದೆ. ಆದರೆ ಮಂಗಳೂರಿನ ಕಿನ್ನಿಗೋಳಿ ಸಮೀಪದ ಅತ್ತೂರಿನಲ್ಲಿ ನಡೆಯುವ ಅರಸು ಕುಂಜಿರಾಯ ದೈವದ ಜಾತ್ರಾ ಮಹೋತ್ಸವ ತುಂಬಾನೇ ವಿಭಿನ್ನವಾಗಿದೆ. ಈ ಕ್ಷೇತ್ರಕ್ಕೆ ಸಂಬಂಧಪಟ್ಟ ಜಾರಂತಾಯ ಬಂಟ ದೈವದ ಮೊಗವನ್ನು (ಮುಖವಾಡ) ಪಲ್ಲಕ್ಕಿಯಲ್ಲಿಟ್ಟು ಸುಮಾರು ಮೂರು ಕಿಲೋ ಮೀಟರ್ ನಡೆದು ಬರುವ ಸನ್ನಿವೇಶವನ್ನು ನೋಡಲೆಂದೇ ನೆರೆ ಗ್ರಾಮದಿಂದ ಬರುತ್ತಾರೆ. ಇಲ್ಲಿ ಪಲ್ಲಕ್ಕಿಯನ್ನು ಸುಮಾರು ಇಪ್ಪತ್ತರಷ್ಟು ಯುವಕರು ಹೊತ್ತು ಬರುತ್ತಾರೆ. ಆಗ ದೈವದ ಮೊಗ ಹೊತ್ತ ಆ ಪಲ್ಲಕ್ಕಿ ಆವೇಶಕ್ಕೊಳಗಾಗಿ ತನ್ನನ್ನು ಹೊತ್ತಿರುವ ಆಳುಗಳನ್ನೇ ಎಳೆದಾಡಲು ಆರಂಭಿಸುತ್ತದೆ ಎಂದು ಅರಸು ಕುಂಜಿರಾಯ ದೈವಸ್ಥಾನದ ಅಧ್ಯಕ್ಷ ಚರಣ್ ಜೆ.ಶೆಟ್ಟಿ ತಿಳಿಸಿದ್ದಾರೆ.

ಪಲ್ಲಕ್ಕಿಯನ್ನು ಹೊತ್ತ ಸುಮಾರು 20 ಮಂದಿಗೂ ಆ ಪಲ್ಲಕ್ಕಿಯ ಆರ್ಭಟವನ್ನು ತಡೆಯಲಾಗೋದಿಲ್ಲ. ಮುಂದೆ ಹೋಗಲೆಂದು ತಂಡದ ಯುವಕರು ಪ್ರಯತ್ನಿಸಿದರೆ ಪಲ್ಲಕ್ಕಿ ತನ್ನಿಂದ ತಾನೇ ಹಿಂದಕ್ಕೆ ಹೋಗುತ್ತದೆ. ಬಳಿಕ ಪ್ರಯತ್ನಿಸಿ ಮುಂದೆ ಹೋದರೆ ಮತ್ತೆ ಎಡಕ್ಕೆ, ಬಲಕ್ಕೆ ಪಲ್ಲಕ್ಕಿ ಸಾಗುತ್ತದೆ. ಪಲ್ಲಕ್ಕಿಯ ಒಳಗಿರುವ ಜಾರಂದಾಯ-ಬಂಟ ದೈವದ ಮೊಗ(ಮುಖವಾಡ) ಪಲ್ಲಕ್ಕಿಯಿಂದ ಹೊರಗೆ ಹಾರಲು ಯತ್ನಿಸುತ್ತದೆಯಂತೆ. ಈ ವೇಳೆ ಪಲ್ಲಕ್ಕಿಯನ್ನು ಹಿಡಿದಿರುವ ಯುವಕರು ಶತ ಪ್ರಯತ್ನದಿಂದ ಪಲ್ಲಕ್ಕಿಯೊಳಗಿರುವ ಮುಖವಾಡ ಬೀಳದಂತೆ ಮುಂದಕ್ಕೆ ಸಾಗಲು ಪ್ರಯತ್ನಿಸುತ್ತಾರೆ. ಸುಮಾರು ಮೂರುಗಂಟೆ ಸತತ ಪ್ರಯತ್ನದ ಬಳಿಕ ಮುಖವಾಡವನ್ನು ಹೊತ್ತು ತಂದ ಪಲ್ಲಕ್ಕಿ ದೈವಸ್ಥಾನದ ಒಳಗೆ ಸೇರುತ್ತದೆ. ಇದನ್ನು ದೈವಸ್ಥಾನದ ಒಳಗೆ ತರೋದೇ ದೈವ ಶಕ್ತಿ ಅನ್ನೋದು ನಂಬಿಕೆಯಾಗಿದೆ.

ಈ ಪಲ್ಲಕ್ಕಿಯನ್ನು ಹೊತ್ತು ತರುವ ಯುವಕರ ತಂಡವೂ ಸುಮಾರು 15 ದಿನಗಳ ಕಾಲ ಸಸ್ಯಾಹಾರದಿಂದ ಇದ್ದು, ಮೂರು ದಿನಗಳ ಕಾಲ ಒಪ್ಪೊತ್ತಿನ ಊಟ ಮಾಡಿ ಶುಚಿಯಾಗಿರುತ್ತಾರೆ. ಪಲ್ಲಕ್ಕಿ ಹೊರುವ ದಿನ ಸಮುದ್ರ ಸ್ನಾನ ಮಾಡಿ ದೈವಸ್ಥಾನಕ್ಕೆ ಬರಬೇಕಾಗುತ್ತದೆ. ಭಾರವಾದ ಹಾಗೂ ಆವೇಶಭರಿತ ಪಲ್ಲಕ್ಕಿಯನ್ನು ಹೊರುವವರ ಹೆಗಲಿನ ಸಿಪ್ಪೆಗಳು ಹೋದರೂ ದೈವೀ ಕಾರಣಿಕದಿಂದ ಯಾವುದೇ ನೋವು ಆಯಾಸಗಳೂ ಆಗೋದಿಲ್ಲ. ಪಲ್ಲಕ್ಕಿ ರಭಸದಿಂದ ಸುತ್ತಾಡಿದರೂ ಇಂದಿಗೂ ಓರ್ವನಿಗೂ ಯಾವುದೇ ಗಾಯಗಳಾಗಿಲ್ಲ ಅನ್ನೋದು ವಿಶೇಷ. ಇದೆಲ್ಲವೂ ದೈವಗಳ ಕಾರಣಿಕ ಎಂದು ಪಲ್ಲಕ್ಕಿ ಹೊರುವವರಾದ ದಿನೇಶ್ ಹರಿಪಾದೆ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *