‘ಕೈ’ ಗೆ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಶಾಕ್.!

ದಾವಣಗೆರೆ: ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ನಲ್ಲಿ ಟಿಕೆಟ್ ಗೊಂದಲದಲ್ಲಿದೆ. ಈಗಾಗಲೇ ಕಾಂಗ್ರೆಸ್ ಹೈಕಮಾಂಡ್, ಹಿರಿಯ ನಾಯಕ ಹಾಗೂ ಹಾಲಿ ಶಾಸಕ ಶಾಮನೂರು ಶಿವಶಂಕರಪ್ಪ ನವರಿಗೆ ಟಿಕೆಟ್ ಕನ್ಫರ್ಮ್ ಮಾಡಿದೆ. ಆದರೆ ಈಗ ಅವರು ಲೋಕ ಕಣದಿಂದ ಹಿಂದೆ ಸರಿಯುವ ಸಾಧ್ಯತೆಗಳಿದೆ ಎನ್ನಲಾಗಿದೆ.

ಇಷ್ಟು ದಿನ ಲೋಕಸಭಾ ಚುನಾವಣೆಯಲ್ಲಿ ಶಾಮನೂರು ಕುಟುಂಬ ಸ್ಪರ್ಧಿಸಲಿದೆ ಎಂದು ಕೇಳಿ ಬರುತ್ತಿತ್ತು. ಆದರೆ ಬಿಜೆಪಿ ಎದುರು ಶಾಮನೂರು ಪುತ್ರ ಎಸ್.ಎಸ್ ಮಲ್ಲಿಕಾರ್ಜುನ್ ಮೂರು ಬಾರಿ ಲೋಕಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು. ಹೀಗಾಗಿ ಅವರು ಈ ಬಾರಿ ಬಿಜೆಪಿ ಎದುರು ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದಾರೆ. ಅಷ್ಟೇ ಅಲ್ಲದೆ ಸಮ್ಮಿಶ್ರ ಸರ್ಕಾರದ ಉಸ್ತುವಾರಿ ಹಾಗೂ ನಿಗಮ ಮಂಡಳಿ ಆಯ್ಕೆಯಲ್ಲಿ ಶಾಮನೂರು ಕುಟುಂಬವನ್ನು ಕಡೆಗಣಿಸಿದ್ದಾರೆ. ಇದರಿಂದ ಕಣದಿಂದ ಹಿಂದೆ ಸರಿಯುತ್ತಿದ್ದಾರೆ ಎನ್ನುವುದು ಶಾಮನೂರು ಆಪ್ತ ವಲಯದಿಂದ ಕೇಳಿ ಬರುತ್ತಿದೆ.

ತೇಜಸ್ವಿ ಪಾಟೀಲ್

ಗುರುವಾರ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಜಿಲ್ಲಾ ಮುಖಂಡರು ಹಾಗೂ ಶಾಮನೂರು ಶಿವಶಂಕರಪ್ಪ, ಎಸ್.ಎಸ್ ಮಲ್ಲಿಕಾರ್ಜುನ್ ಅವರನ್ನು ಸಭೆಗೆ ಆಹ್ವಾನ ಮಾಡಿದ್ದರು. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಶಾಮನೂರು ಹಾಗೂ ಎಸ್.ಎಸ್ ಮಲ್ಲಿಕಾರ್ಜುನ್ ಗೈರಾಗಿದ್ದರು. ಇದರಿಂದ ಅಸಮಾಧಾನ ಕಂಡುಬಂದಿದೆ. ಹೀಗಾಗಿ ಜಿಲ್ಲೆಯಲ್ಲಿ ಬಿಜೆಪಿಯನ್ನು ಎದುರಿಸುವ ಸೂಕ್ತ ಅಭ್ಯರ್ಥಿಗಾಗಿ ಎರಡು ಹೆಸರನ್ನು ಸಭೆಯಲ್ಲಿ ಸೂಚಿಸಿದ್ದು, ಮಾಜಿ ಮುಖ್ಯಮಂತ್ರಿ ಜೆ.ಹೆಚ್ ಪಾಟೀಲ್ ರ ಮಗ ತೇಜಸ್ವಿ ಪಾಟೀಲ್ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಬಿ ಮಂಜಪ್ಪನ ಹೆಸರು ಕೇಳಿಬಂದಿದೆ.

ಮಂಜಪ್ಪ

ಸ್ವತಃ ದಿನೇಶ್ ಗುಂಡೂರಾವ್ ತೇಜಸ್ವಿ ಪಾಟೀಲ್ ಗೆ ಕರೆಮಾಡಿ ಭೇಟಿಯಾಗುವಂತೆ ಸೂಚಿಸಿದ್ದಾರೆ. ಇಂದು ತೇಜಸ್ವಿ ಪಾಟೀಲ್ ಹಾಗೂ ಜಿಲ್ಲಾಧ್ಯಕ್ಷ ಮಂಜಪ್ಪನ ಜೊತೆ ದಿನೇಶ್ ಗುಂಡೂರಾವ್ ಮಾತುಕತೆ ನಡೆಸಿ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ಫೈನಲ್ ಮಾಡುವ ಸಾಧ್ಯತೆ ಹೆಚ್ಚಿದೆ. ತೇಜಸ್ವಿ ಪಾಟೀಲ್ ಅವರ ಸಹೋದರ ಮಹೀಮಾ ಪಾಟೀಲ್ ಜೆಡಿಯೂ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದು, ಕೆಲ ದಿನಗಳ ಹಿಂದೆ ಬಿಜೆಪಿ ಅಭ್ಯರ್ಥಿ ಜಿ.ಎಂ ಸಿದ್ದೇಶ್ವರ್ ಗೆ ಬೆಂಬಲ ನೀಡುವುದಾಗಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದರು. ಈಗ ತಮ್ಮ ಸಹೋದರರಿಗೆ ಬೆಂಬಲ ನೀಡುತ್ತಾರಾ ಇಲ್ಲ ಮಾತನ್ನು ಉಳಿಸಿಕೊಳ್ಳುತ್ತಾರಾ ಎನ್ನುವುದನ್ನು ಕಾದು ನೋಡಬೇಕಾಗಿದೆ.

Comments

Leave a Reply

Your email address will not be published. Required fields are marked *