– ಪುತ್ರನಿಗಾಗಿ ಖರ್ಗೆ ಕಾಂಗ್ರೆಸ್‍ನಿಂದ ಎಲ್ಲರನ್ನೂ ಹೊರಹಾಕಿದ್ರು
ಕಲಬುರಗಿ: ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ (ಎಸ್‍ಟಿ) ಸೇರಿಸುವುದು ನನ್ನ ಕೊನೆ ಆಸೆ. ಈ ನಿಟ್ಟಿನಲ್ಲಿ ನಿರಂತರವಾಗಿ ಹೋರಾಡುತ್ತೇನೆ ಎಂದ ಬಿಜೆಪಿ ಮುಖಂಡ ಬಾಬುರಾವ್ ಚಿಂಚನಸೂರ್ ವಾಗ್ದಾಳಿ ನಡೆಸಿದ್ದಾರೆ.
ಜಿಲ್ಲೆಯ ಸೇಡಂನಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ತಮ್ಮ ಪುತ್ರನಿಗಾಗಿ ಕಾಂಗ್ರೆಸ್‍ನಿಂದ ಎಲ್ಲರನ್ನೂ ಹೊರಹಾಕಿದರು. ಈಗ ಅವರಿಬ್ಬರೇ ಪಕ್ಷದಲ್ಲಿ ಉಳಿದುಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.

ಮಾಲೀಕಯ್ಯ ಗುತ್ತೆದಾರ ಅವರು ಸಚಿವ ಪ್ರಿಯಾಂಕ್ ಖರ್ಗೆ ಬೆಳವಣಿಗೆಗೆ ಅಡ್ಡಿ ಆಗುತ್ತಾರೆ ಎನ್ನುವುದು ಮಲ್ಲಿಕಾರ್ಜುನ ಖರ್ಗೆ ಅವರ ವಿಚಾರವಾಗಿತ್ತು. ಹೀಗಾಗಿ ಅವರನ್ನು ಪಕ್ಷದಿಂದ ಹೊರ ಹಾಕಿದರು. ಮಾಜಿ ಸಚಿವ ಖಮರ್ ವುಲ್ಲಾ ಇಸ್ಲಾಂ ಅವರಿಂದ ಮಂತ್ರಿಸ್ಥಾನ ಕಿತ್ತುಕೊಂಡರು. ಇದರಿಂದ ಆಘಾತಕ್ಕೆ ಒಳಗಾದ ಖಮರ್ ವುಲ್ಲಾ ಇಸ್ಲಾಂ ಹೃದಯಾಘತಕ್ಕೆ ಒಳಗಾಗಿ ಪ್ರಾಣ ಬಿಟ್ಟರು. ನಂತರ ತಂತ್ರ ರಚಿಸಿ ನನ್ನನ್ನು ಪಕ್ಷದಿಂದ ಹೊರಹಾಕಿದರು ಎಂದು ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಗುಡುಗಿದರು.
ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಅವರನ್ನು ಆಯ್ಕೆ ಮಾಡಲು ಎಲ್ಲರೂ ಶ್ರಮಿಸಬೇಕು. ಉಮೇಶ್ ಜಾಧವ್ ಆಯ್ಕೆಯಾದರೆ ಅವರಿಗೆ ಕೇಂದ್ರದಲ್ಲಿ ಮಂತ್ರಿಯಾಗುತ್ತಾರೆ. ಈ ಮೂಲಕ ಜಿಲ್ಲೆಯ ಅಭಿವೃದ್ಧಿ ಮಾಡುತ್ತಾರೆ. ಮಲ್ಲಿಕಾರ್ಜುನ ಖರ್ಗೆ ಅವರಿಗಿಂತ ಉತ್ತಮ ಕಾರ್ಯಗಳನ್ನು ಉಮೇಶ್ ಜಾಧವ್ ಮಾಡುತ್ತಾರೆ. ಮಲ್ಲಿಕಾರ್ಜುನ ಖರ್ಗೆ ಹಳೇ ಪರ್ವತ, ಅದು ತಾನಾಗಿಯೇ ಕುಸಿಯಲು ಆರಂಭಿಸಿದೆ ಎಂದು ವ್ಯಂಗ್ಯವಾಡಿದರು.


Leave a Reply