ಖರ್ಗೆ ಕೆಡವಲು ಕಮಲ ಒಗ್ಗಟ್ಟಿನ ಮಂತ್ರ – ಅಹಿಂದ ಮತಕ್ಕಾಗಿ ಬಿಜೆಪಿ ಮಾಸ್ಟರ್ ಪ್ಲಾನ್!

ಕಲಬುರಗಿ: ಕಾಂಗ್ರೆಸ್ ಭದ್ರಕೋಟೆ ಕಲಬುರಗಿಯಲ್ಲಿ ಈ ಬಾರಿ ಶತಾಯಗತಾಯ ಕಮಲ ಅರಳಿಸಲು ಬಿಜೆಪಿ ಸಜ್ಜಾಗಿದೆ. ಬಿಜೆಪಿಯ ಮಾಸ್ಟರ್ ಪ್ಲಾನಿಗೆ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕೈ ನಾಯಕರು ದಂಗಾಗಿದ್ದಾರೆ.

ರಾಜ್ಯದ ಟಾಪ್ 5 ಲೋಕಸಭಾ ಕ್ಷೇತ್ರಗಳಲ್ಲಿ ಕಲಬುರಗಿ ಮೀಸಲು ಲೋಕಸಭಾ ಕ್ಷೇತ್ರ ಸಹ ಒಂದಾಗಿದೆ. ಇಲ್ಲಿ ಕೈ ಮುಖಂಡ ಹಾಲಿ ಸಂಸದ ಮಲ್ಲಿಕಾರ್ಜುನ ಖರ್ಗೆ ಕೆಡವಲು ಬಿಜೆಪಿ ನಾಯಕರು ಒಗಟ್ಟಿನ ಮಂತ್ರ ಜಪಿಸುತ್ತಿದ್ದು, ಬಿಜೆಪಿ ಅಭ್ಯರ್ಥಿ ಡಾ.ಉಮೇಶ್ ಜಾಧವ್‍ಗೆ ಮಾಜಿ ಸಚಿವರಾದ ಮಾಲೀಕಯ್ಯ ಗುತ್ತೇದಾರ್, ಬಾಬೂರಾವ್ ಚಿಂಚನಸೂರ್ ಸೇರಿದಂತೆ ಬಿಜೆಪಿಯ ಘಟಾನುಘಟಿ ನಾಯಕರು ಸಾಥ್ ನೀಡಿದ್ದಾರೆ.

ಕ್ಷೇತ್ರದಲ್ಲಿ ಹಾಲಿ ಶಾಸಕರಾದ ದತ್ತಾತ್ರೇಯ ಪಾಟೀಲ್, ಬಸವರಾಜ್ ಮತ್ತಿಮೂಡ ಮತ್ತು ರಾಜಕುಮಾರ್ ತೆಲ್ಕೂರ ಸಹ ಕ್ಷೇತ್ರದ ಗಲ್ಲಿಗಲ್ಲಿಗಳಲ್ಲಿ ಹೋಗಿ ಬಿಜೆಪಿ ಪರ ಮತ ಯಾಚಿಸುತ್ತಿದ್ದಾರೆ. ಈ ಮೂಲಕ ಬಿಜೆಪಿ ಒಗ್ಗಟ್ಟಾಗಿ ಖರ್ಗೆ ವಿರುದ್ಧ ತೊಡೆ ತಟ್ಟಿದ್ದು, ಇದು ಕೈ ನಾಯಕರಲ್ಲಿ ಆತಂಕ ಸೃಷ್ಟಿಸಿದೆ. ಕೆಲ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಕೈನತ್ತ ಮುಖ ಮಾಡಿದ್ರೂ ಕೂಡ ಅದಕ್ಕೆ ಡಾ.ಉಮೇಶ್ ಜಾಧವ್ ಮಾತ್ರ ತಲೆ ಕಡಿಸಿಕೊಂಡಿಲ್ಲ ಎಂಬುದಾಗಿ ಮೂಲಗಳು ತಿಳಿಸಿವೆ.

ಇತ್ತ ಜಿಲ್ಲೆಯಲ್ಲಿ ಲಿಂಗಾಯತ-ಲಂಬಾಣಿ ಮತಗಳ ಜೊತೆಗೆ ಅಹಿಂದ ವರ್ಗದ ಮತ ಸೆಳೆಯಲು ಬಿಜೆಪಿ ಮುಂದಾಗಿದ್ದು, ಜಿಲ್ಲೆಯಲ್ಲಿ ಬಹುಸಂಖ್ಯಾತರಾದ ಕೋಲಿ ಮತ ಸೆಳೆಯಲು ಬಾಬೂರಾವ್ ಚಿಂಚನಸೂರ್ ಮುಂದಾಗಿದ್ದಾರೆ. ಜಿಲ್ಲೆಯ ಪ್ರಮುಖ ಸಮಾಜ ಮುಖಂಡರ ಜೊತೆ ಸಭೆ ನಡೆಸಿ ಬಿಜೆಪಿ ಜಾಧವ್ ಅವರಿಗೆ ಬೆಂಬಲಿಸಿ ಎಂದು ಕರೆ ನೀಡಿದ್ದಾರೆ. ಅಹಿಂದ ಮತಗಳನ್ನೆ ನಂಬಿರುವ ಖರ್ಗೆಗೆ ಬಿಜೆಪಿಯ ಈ ಮಾಸ್ಟರ್ ಪ್ಲಾನ್ ಇದೀಗ ನುಂಗಲಾಗದ ಬಿಸಿ ತುಪ್ಪವಾಗಿದೆ ಎನ್ನಲಾಗುತ್ತಿದೆ.

ಬಿಜೆಪಿಯ ಈ ತಂತ್ರಕ್ಕೆ ಪ್ರತಿತಂತ್ರ ರಚಿಸಬೇಕಾದ ಖರ್ಗೆ ಹಾಗೂ ಜೂನಿಯರ್ ಖರ್ಗೆ ರಾಹುಲ್ ಭೇಟಿಯ ನಂತರ ಜಿಲ್ಲೆಗೆ ವಾಪಸ್ ಬಂದಿಲ್ಲ. ಸದ್ಯ ಇಂದಿನಿಂದ ಪ್ರಚಾರ ಕಾರ್ಯಕ್ಕೆ ಖರ್ಗೆ ಧುಮುಕಲಿದ್ದು, ಬಿಜೆಪಿ ತಂತ್ರಕ್ಕೆ ಪ್ರತಿತಂತ್ರ ರೂಪಿಸುವರೇ ಎಂಬುದು ಸದ್ಯದ ಕುತೂಹಲವಾಗಿದೆ. ಮೇಲ್ನೋಟಕ್ಕೆ ಕಾಂಗ್ರೆಸ್ ಭದ್ರಕೋಟೆಯಾದ ಕಲಬುರಗಿಯಲ್ಲಿ, ಇದೇ ಮೊದಲ ಬಾರಿಗೆ ಬಿಜೆಪಿ ಇಂತಹ ಟಫ್ ಫೈಟ್ ನೀಡುತ್ತಾ ಇರುವುದು ಕೈ ನಾಯಕರ ನಿದ್ದೆಗೆಡಿಸಿರುವುದು ಸತ್ಯ.

Comments

Leave a Reply

Your email address will not be published. Required fields are marked *