ಅಧಿಕೃತ ದಾಖಲೆಗಳಿದ್ರೆ ಬನ್ನಿ: ‘ಕೈ’ ಪಡೆಗೆ ಆಯನೂರು ಮಂಜುನಾಥ್ ಸವಾಲ್

ಶಿವಮೊಗ್ಗ: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ಮಾಡುತ್ತಿರುವ ಡೈರಿ ಆರೋಪದ ಕುರಿತು ನಿಮ್ಮ ಬಳಿ ಅಧಿಕೃತ ದಾಖಲೆಗಳು ಇದ್ದರೆ ಮಾತನಾಡಿ, ಇಲ್ಲವಾದರೇ ನಿಮ್ಮ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಶಾಸಕ ಆಯನೂರು ಮಂಜುನಾಥ್ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

ಇಂದು ಬಿಎಸ್‍ವೈ ಡೈರಿ ಪ್ರಕರಣ ಬಗ್ಗೆ ಸುದ್ದಿಗೋಷ್ಠಿ ಮಾಡಿದ ಅವರು, ಅಧಿಕೃತ ದಾಖಲೆಗಳು ಇದ್ದರೆ ಬನ್ನಿ ಎಂದು ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದ್ದಾರೆ. ಮುಂಚೂಣಿಯಲ್ಲಿರುವ ಬಿಜೆಪಿಯ ಸಮರ್ಥ ನಾಯಕ ಬಿ.ಎಸ್.ಯಡಿಯೂರಪ್ಪ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೆಲಸವನನ್ನು ಕಾಂಗ್ರೆಸ್ಸಿಗರು ಮಾಡುತ್ತಿದ್ದಾರೆ. ಇಡೀ ರಾಷ್ಟ್ರದಲ್ಲಿ ಸೋಲುತ್ತೇವೆ ಎಂಬ ಭಯ ಅವರನ್ನು ಕಾಡತೊಡಗಿದೆ. ಅದ್ದರಿಂದಾಗಿ ಹೋರಾಟಗಾರನ ವರ್ಚಸ್ಸಿಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.

ಅಷ್ಟೇ ಅಲ್ಲದೆ, ಹಣ- ಮದುವೆ ಯಾವ ವಿಷಯವೇ ಆಗಲಿ, ಅಧಿಕೃತ ದಾಖಲೆ ಇದ್ದರೆ ಮಾತನಾಡಿ, ಇಲ್ಲದಿದ್ದರೆ ಕಟಕಟೆಗೆ ನಿಲ್ಲಿಸುವ ಕೆಲಸವನ್ನು ನಾವು ಮಾಡುತ್ತೇವೆ ಎಂದು ಎಚ್ಚರಿಕೆಯನ್ನೂ ಕೂಡ ನೀಡಿದ್ದಾರೆ.

ಬಿಎಸ್‍ವೈ ಕೇಂದ್ರ ನಾಯಕರಿಗೆ ಕೋಟಿಗಟ್ಟಲೆ ಹಣ ನೀಡಿದ್ದಾರೆ. ಅದರ ಬಗ್ಗೆ ಬರೆದಿಟ್ಟಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಡೈರಿಯನ್ನು ಇಟ್ಟುಕೊಂಡು ಆರೋಪ ಮಾಡುತ್ತಿದ್ದಾರೆ. ಆದ್ರೆ ಬಿಜೆಪಿ ನಾಯಕರು ಬಿಎಸ್‍ವೈ ಪರ ನಿಂತು ವಿರೋಧ ಪಕ್ಷಗಳಿಗೆ ತಿರುಗೇಟು ನೀಡುತ್ತಿದ್ದಾರೆ. ಇತ್ತ ಆದಾಯ ತೆರಿಗೆ ಇಲಾಖೆಯೂ ಸಹ ಬಿಡುಗಡೆಗೊಂಡಿರುವ ದಾಖಲೆಗಳು ನಕಲಿ ಎಂದು ಸ್ಪಷ್ಟಪಡಿಸಿದೆ.

Comments

Leave a Reply

Your email address will not be published. Required fields are marked *