ಕಟ್ಟಡ ಕುಸಿತ ದುರಂತಕ್ಕೆ 7 ಮಂದಿ ಬಲಿ- 61 ಮಂದಿಯ ರಕ್ಷಣೆ

ಧಾರಾವಾಡ: ಧಾರವಾಡದ ಕಟ್ಟಡ ಕುಸಿತ ದುರಂತ 7 ಮಂದಿಯ ಜೀವ ಬಲಿ ಪಡೆದಿದ್ದು, 2 ದಿನಗಳ ಕಾರ್ಯಾಚರಣೆ ಬಳಿಕ 61 ಮಂದಿಯನ್ನು ಸುರಕ್ಷಿತವಾಗಿ ಹೊರಗಡೆ ತೆಗೆಯಲಾಗಿದೆ. ಎಲ್ಲರೂ ಖಾಸಗಿ ಆಸ್ಪತ್ರೆ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

6 ಅಂತಸ್ಥಿನ ಕಟ್ಟಡದಲ್ಲಿ ಪೇಂಟಿಂಗ್ ಅಂಗಡಿ ಇಟ್ಟುಕೊಂಡಿದ್ದ ತಂದೆ- ಮಗ ಅವಶೇಷಗಳಡಿ ಸಿಲುಕಿ ಸಾವನ್ನಪ್ಪಿದ್ದಾರೆ. ಧಾರವಾಡದ ತಪೋವನ ಸಮೀಪದ, ಹಳಿಯಾಳ ರಸ್ತೆ ಡಿ.ಬಿ ಕಾಲೋನಿಯ ನಿವಾಸಿಗಳಾದ ತಂದೆ ಮಹೇಶ್ವರ ಹಿರೇಮಠ ಹಾಗೂ ಅವರ ಮಗ ಅಶೀತ್ ಹಿರೇಮಠ ಮರಣ ಹೊಂದಿದ ದುರ್ದೈವಿಗಳು.

ಕಟ್ಟಡದ ನೆಲಮಹಡಿಯಲ್ಲಿ ತಾಯಿ- ಮಗಳು ಸಿಲುಕಿ ಹಾಕಿಕೊಂಡಿದ್ದು, ತಾಯಿ ಪ್ರೇಮಾ ಉಣಕಲ್ ಅವರನ್ನು ರಕ್ಷಣಾ ಕಾರ್ಯಾಚರಣೆಯಲ್ಲಿ ಸುರಕ್ಷಿತವಾಗಿ ಹೊರಗೆ ಕರೆತರಲಾಗಿದೆ. ಅವರ ಮಗಳು ದಿವ್ಯಾ ಅವಶೇಷಗಳಡಿ ಸಿಲುಕಿ ಹಾಕಿಕೊಂಡಿದ್ದು, ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ.

ಕಟ್ಟಡದ ಗ್ರೌಂಡ್ ಫ್ಲೋರಿನಲ್ಲಿ ಕಂಪ್ಯೂಟರ್ ಸೆಂಟರ್ ಇಟ್ಟುಕೊಂಡಿದ್ದ ಅನುಪ್ ಕುಡತಾರಕರ್ ಜೊತೆಗೆ ಅಂಗಡಿಗೆ ಹೋಗಿದ್ದ, 3 ಮಂದಿ ವಿದ್ಯಾರ್ಥಿನಿಯರು ಇದ್ದಾರೆ ಎನ್ನುವ ಮಾಹಿತಿ ರಕ್ಷಣಾ ಸಿಬ್ಬಂದಿಗೆ ಇದೆ. ಕಲಘಟಗಿ ನಿವಾಸಿ ನಬೀಸಾಬ ನದಾಫ ಪ್ರಣಾಪಾಯದಿಂದ ಪಾರಾಗಿದ್ದಾನೆ. ಎನ್.ಡಿ.ಆರ್.ಎಫ್ ತಂಡ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಸೇರಿದಂತೆ ಸ್ಥಳೀಯರು ರಕ್ಷಣಾ ಕಾರ್ಯಚರಣೆಯಲ್ಲಿ ತೊಡಗಿದ್ದಾರೆ.

Comments

Leave a Reply

Your email address will not be published. Required fields are marked *