ಪರೀಕ್ಷೆಯಲ್ಲೂ ಪಬ್‍ಜಿ ಪ್ರೇಮ ಮೆರೆದ ಆಟಗಾರ!

ಗದಗ: ಪಬ್‍ಜಿ ಗೇಮ್ ಆಡುವುದನ್ನು ಚಟವಾಗಿಸಿಕೊಂಡಿದ್ದ ಪಿಯು ವಿದ್ಯಾರ್ಥಿಯೊರ್ವ ತನ್ನ ವಾರ್ಷಿಕ ಪರೀಕ್ಷೆಯ ಅರ್ಥಶಾಸ್ತ್ರ ಪರೀಕ್ಷೆಯಲ್ಲಿ ಪಬ್‍ಜಿ ಗೇಮ್ ಆಡುವುದು ಹೇಗೆ ಎಂದು ಬರೆದಿಟ್ಟಿದ್ದು, ಪರಿಣಾಮ ಪರೀಕ್ಷೆಯಲ್ಲಿ ಫೇಲ್ ಆಗಿರುವ ಘಟನೆ ಗದಗದಲ್ಲಿ ನಡೆದಿದೆ.

ನಗರದ ಕಾಲೇಜೊಂದರಲ್ಲಿ ಪ್ರಥಮ ಪಿಯು ವ್ಯಾಸಂಗ ಮಾಡುತ್ತಿದ್ದ, ವರುಣ್ (ಹೆಸರು ಬದಲಾಯಿಸಲಾಗಿದೆ) ತನ್ನ ಅರ್ಥಶಾಸ್ತ್ರ ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ ಪಬ್‍ಜಿ ಗೇಮ್ ಆಡುವುದು ಹೇಗೆ ಎಂಬುವುದನ್ನೇ ಬರೆದು ಬಂದಿದ್ದ.

ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತೀರ್ಣನಾಗಿದ್ದ ವಿದ್ಯಾರ್ಥಿ ಕಾಲೇಜಿಗೆ ಸೇರಿದ ಬಳಿಕ ಮೊಬೈಲ್‍ನಲ್ಲಿ ಪಬ್‍ಜಿ ಆಡುವುದನ್ನು ಮನರಂಜನೆಗಾಗಿ ಆರಂಭಿಸಿದ್ದ. ಆದರೆ ದಿನಕಳೆದಂತೆ ಆತನಿಗೆ ಗೇಮ್ ಆಡುವುದು ಚಟವಾಗಿ ಮಾರ್ಪಟ್ಟಿತ್ತು. ಮನೆಯಲ್ಲಿ ಪೋಷಕರು ಪ್ರಶ್ನೆ ಮಾಡಿದರು ಕೂಡ ಸ್ನೇಹಿತರೊಂದಿಗೆ ಚಾಟ್ ಮಾಡುತ್ತಿರುವುದಾಗಿ ಹೇಳಿ ಗೇಮಿನ ದಾಸನಾಗಿದ್ದ. ಆತನ ಮೇಲೆ ಈ ಗೇಮ್ ಎಷ್ಟು ಪ್ರಭಾವ ಉಂಟು ಮಾಡಿತ್ತು ಎಂದರೆ, ಕಾಲೇಜು ತರಗತಿಗಳನ್ನು ಗೈರು ಹಾಜರಾಗಿ ಪಬ್‍ಜಿ ಗೇಮ್ ಆಡುತ್ತಲೇ ಕುಳಿತಿರುತ್ತಿದ್ದ. ಪರೀಕ್ಷೆಯ ಸಮಯವೂ ಕೂಡ ವಿದ್ಯಾರ್ಥಿಯ ಗಮನಕ್ಕೆ ಬಂದಿರಲಿಲ್ಲ.

ಸದ್ಯ ವಿದ್ಯಾರ್ಥಿ ಪರೀಕ್ಷೆಯಲ್ಲಿ ಫೇಲ್ ಆದ ಬಳಿಕ ಆತನ ತಪ್ಪು ಅರಿವಾಗಿದ್ದು, ಪೋಷಕರು ಕೂಡ ಮೊಬೈಲ್ ದೂರ ಮಾಡಿದ್ದಾರೆ. ವರುಣ್‍ನನ್ನು ಗೇಮ್ ನಿಂದ ದೂರ ಮಾಡಲು ಪೋಷಕರು ಮನೋತಜ್ಞರ ಸಹಾಯವನ್ನು ಪಡೆದಿದ್ದರು ಎಂಬ ಮಾಹಿತಿ ಲಭಿಸಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿದ್ಯಾರ್ಥಿ, ನಾನು ಪರೀಕ್ಷೆಯಲ್ಲಿ ಬರೆದಿರುವ ಉತ್ತರವನ್ನು ನೆನಪಿಸಿಕೊಂಡರೆ ನನ್ನ ಬಗ್ಗೆ ನನಗೆ ಕೋಪ ಬರುತ್ತದೆ. ಇಗ ನನಗೆ ಮತ್ತೆ ಬರೆಯಲು ಜೂನ್ ನಲ್ಲಿ ಅವಕಾಶ ಇದ್ದು, ಪರೀಕ್ಷೆಗಾಗಿ ತಯಾರಿ ನಡೆಸಿದ್ದೇನೆ. ಆದರೆ ಗೇಮ್ ದೂರವಾದರೂ ಈಗಲು ನನಗೆ ಆದರ ಚಿತ್ರಣವೇ ಕಣ್ಣ ಮುಂದೆ ಬರುತ್ತದೆ ಎಂದು ತಿಳಿಸಿದ್ದಾನೆ.

Comments

Leave a Reply

Your email address will not be published. Required fields are marked *