ಮೋದಿ ಸರ್ಕಾರವನ್ನು ಉರುಳಿಸಲು ತಮ್ಮ ಪ್ರಚಾರ ತಂತ್ರವನ್ನು ತಿಳಿಸಿದ ದೋಸ್ತಿಗಳು

– ಮಾ. 31ಕ್ಕೆ ಬೃಹತ್ ಸಮಾವೇಶ
– ಮೈತ್ರಿ ಧರ್ಮ ಪಾಲನೆಗೆ ಕಾರ್ಯಕರ್ತರಿಗೆ ಸೂಚನೆ

ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಧರ್ಮ ಪಾಲಿಸಲು ನಮ್ಮ, ನಮ್ಮ ಕಾರ್ಯಕರ್ತರಿಗೆ ಕಟ್ಟು ನಿಟ್ಟಿನ ಸೂಚನೆ ನೀಡುತ್ತೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಕಾಂಗ್ರೆಸ್-ಜೆಡಿಎಸ್ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಿಎಂ, ಲೋಕಸಭಾ ಚುನಾವಣೆ ಪ್ರಚಾರದ ಕುರಿತು ನಿನ್ನೆ ರಾತ್ರಿ ಹಾಗೂ ಇಂದು ಸಭೆ ಮಾಡಿದ್ದೇವೆ. ಒಟ್ಟಿಗೆ ಪ್ರಚಾರ ಮಾಡುವುದು ನಿರ್ಧಾರವಾಗಿದೆ. ಉಪ ಚುನಾವಣೆಯಲ್ಲೇ ಈ ಕುರಿತು ನಿರ್ಧಾರವಾಗಿತ್ತು. ಅದನ್ನು ಮುಂದುವರಿಸುತ್ತೇವೆ ಎಂದರು.

ಬಿಜೆಪಿ ಸೋಲಿಸುವುದು ನಮ್ಮ ಗುರಿ. ನಾವಿಬ್ಬರು ಸೇರಿ ಹೆಚ್ಚು ಸ್ಥಾನಗಳಿಸಬೇಕು ಎನ್ನುವುದು ಅಂದೇ ತೀರ್ಮಾನ ಆಗಿತ್ತು. ಹೀಗಾಗಿ ಉಪಚುನಾವಣೆಯಲ್ಲಿ ನಾವು ಒಟ್ಟಾಗಿ ಎದುರಿಸಿದ್ವಿ. ಶಿವಮೊಗ್ಗ ಬಿಟ್ಟು ಎಲ್ಲಾ ಕ್ಷೇತ್ರ ನಾವು ಗೆಲುವು ಸಾಧಿಸಿದ್ದೇವು. ಉಪ ಚುನಾವಣೆಯಲ್ಲಿ ನಾವು ಭಾರೀ ಅಂತರದಲ್ಲಿ ಜಯಗಳಿಸಿದ್ದೇವು. ಆದರೆ ಶಿವಮೊಗ್ಗ ಕಡಿಮೆ ಮತಗಳ ಅಂತರದಲ್ಲಿ ಸೋತೆವು. ಈ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಸುವುದು ನಮ್ಮ ಗುರಿ ಎಂದು ಹೇಳಿದರು.

ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುತ್ತೇವೆ ಎಂದು ಬಿಜೆಪಿಯವರು ಹೇಳುತ್ತಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಈ ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಮತ ವಿಭಜನೆ ಆಗಿತ್ತು. ಈ ಬಾರಿ ಕಾಂಗ್ರೆಸ್-ಜೆಡಿಎಸ್ ಮತ ವಿಭಜನೆ ಆಗುದಿಲ್ಲ. ಮೈತ್ರಿಯಲ್ಲಿ ಚುನಾವಣೆ ಎದುರಿಸುತ್ತಿದ್ದು, ಈ ಬಾರಿ ಬಿಜೆಪಿಗೆ ಸೋಲು ಆಗುತ್ತದೆ ಎಂದರು.

ಈಗಾಗಲೇ ಸೀಟು ಹಂಚಿಕೆಯಾಗಿದ್ದು, ಅಭ್ಯರ್ಥಿಗಳ ಆಯ್ಕೆ ಕೂಡ ನಡೆಯುತ್ತಿದೆ. ಎಲ್ಲಾ ಜಿಲ್ಲಾ ಅಧ್ಯಕ್ಷರಿಗೂ ಒಟ್ಟಿಗೆ ಹೋಗಲು ಸೂಚನೆ ನೀಡಲಾಗಿದೆ. ಯಾವುದೇ ಸಣ್ಣ ಭಿನ್ನಾಭಿಪ್ರಾಯ ಇದ್ದರೂ ಸರಿಪಡಿಸಿಕೊಂಡು ಪ್ರಚಾರ ಮಾಡುವಂತೆ ಸೂಚನೆ ನೀಡಲಾಗಿದೆ. ಪ್ರತಿ ಕ್ಷೇತ್ರಕ್ಕೆ ಎರಡು ಪಕ್ಷಗಳಿಂದ ಹಿರಿಯ ನಾಯಕರುಗಳನ್ನು ವೀಕ್ಷಕರಾಗಿ ನೇಮಿಸುತ್ತೇವೆ ಎಂದು ತಿಳಿಸಿದರು.

ನಮ್ಮ ರಾಜಕೀಯ ಎದುರಾಳಿ ಬಿಜೆಪಿ. ನಾವೆಲ್ಲರೂ ಒಟ್ಟಾಗಿ ಚುನಾವಣೆ ಪ್ರಚಾರ ಮಾಡುತ್ತೇವೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಪ್ರಚಾರ ಮಾಡುತ್ತಾರೆ. ಮೈಸೂರು ಅಥವಾ ಬೆಂಗಳೂರಿನಲ್ಲಿ ಮಾರ್ಚ್ 31ಕ್ಕೆ ಒಟ್ಟಾಗಿ ಬೃಹತ್ ಸಮಾವೇಶ ಮಾಡುತ್ತೇವೆ. ರಾಹುಲ್ ಗಾಂಧಿ ಅವರಿಗೆ ಬಿಡುವು ಸಿಕ್ಕರೆ ಅದಕ್ಕೂ ಮುನ್ನವೇ ಮೊದಲ ಸಮಾವೇಶ ನಡೆಸಲಾಗುತ್ತದೆ. ಅವತ್ತೇ ನಮ್ಮ ಚುನಾವಣೆ ರಣ ಕಹಳೆ ಪ್ರಾರಂಭ ಆಗುತ್ತದೆ ಎಂದರು.

ಬೃಹತ್ ಸಮಾವೇಶ ಬಳಿಕ ಒಟ್ಟಾಗಿ ಪ್ರಚಾರ ಆರಂಭಿಸುತ್ತೇವೆ. 28 ಕ್ಷೇತ್ರ ಗೆಲ್ಲಲು ನಾವು ಕೆಲಸ ಮಾಡುತ್ತೇವೆ. ಕಾರ್ಯಕರ್ತರು ಒಟ್ಟಾಗಿ ನಮ್ಮ ಸಮ್ಮಿಶ್ರ ಸರ್ಕಾರಕ್ಕೆ ಹೆಚ್ಚು ಸ್ಥಾನ ಗಳಿಸಲು ಕೆಲಸ ಮಾಡಬೇಕು ಎಂದು ಮನವಿ ಮಾಡಿಕೊಂಡರು.

Comments

Leave a Reply

Your email address will not be published. Required fields are marked *