ನಾಲ್ವರು ಯುವಕರಿಂದ 50ಕ್ಕೂ ಹೆಚ್ಚು ಯುವತಿಯರಿಗೆ ವಂಚನೆ

– ರಾಜಕೀಯ ತಿರುವು ಪಡೆದ ಪ್ರಕರಣ

ಚೆನ್ನೈ: ನಾಲ್ಕು ಯುವಕರ ಗುಂಪೊಂದು ಸಾಮಾಜಿಕ ಜಾಲತಾಣದಲ್ಲಿ 50ಕ್ಕೂ ಹೆಚ್ಚು ಮಹಿಳೆಯರನ್ನು ಆಕರ್ಷಿಸಿ, ಲೈಂಗಿಕ ಕಿರುಕುಳ ನೀಡಿದ ಘಟನೆ ತಮಿಳುನಾಡಿನಲ್ಲಿ ನಡೆದಿದ್ದು, ಇದು ಸದ್ಯ ರಾಜಕೀಯ ತಿರುವು ಪಡೆದುಕೊಂಡು ಭಾರೀ ಚರ್ಚೆಗೆ ಕಾರಣವಾಗಿದೆ.

ತಿರುನಾವುಕ್ಕರಸು (26), ಸತೀಶ್ (29), ಸಬರಿರಾಜನ್ ಮತ್ತು ವಸಂತ್‍ಕುಮಾರ್ ಬಂಧಿತ ಆರೋಪಿಗಳು. ತಮಿಳುನಾಡಿನ ವಿವಿಧ ಭಾಗದ ಯುವತಿಯರು, ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಸ್ಥ ಮಹಿಳೆಯರಿಗೆ ಆರೋಪಿಗಳು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ.

ತಮಿಳುನಾಡಿನ 19 ವರ್ಷದ ಯುವತಿಗೆ ಲೈಂಗಿಕ ಕಿರುಕುಳ ಹಾಗೂ ಬೆದರಿಕೆ ಹಾಕುತ್ತಿದ್ದ ಪ್ರಕರಣದಲ್ಲಿ ಯುವಕರನ್ನು ಫೆಬ್ರವರಿಯಲ್ಲಿ ಬಂಧಿಸಲಾಗಿತ್ತು. ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ 50ಕ್ಕೂ ಹೆಚ್ಚು ಮಹಿಳೆಯರು, ಯುವತಿಯರಿಗೆ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೆ ಆರೋಪಿಗಳ ಮೊಬೈಲ್ ಫೋನ್‍ಗಳನ್ನು ಪರಿಶೀಲನೆ ಮಾಡಿದಾಗ ಅದರಲ್ಲಿ ಸುಮಾರು 50 ಮಹಿಳೆಯರ ಫೋಟೋಗಳಿದ್ದವು ಎಂದು ವಿಚಾರಣೆ ನಡೆಸಿದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಏನಿದು ಪ್ರಕರಣ?
ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿರುವ ಆರೋಪಿಗಳಾದ ತಿರುನಾವುಕ್ಕರಸು ಹಾಗೂ ಸತೀಶ್ ಆರು ವರ್ಷಗಳಿಂದ ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಿ, ವಿಡಿಯೋ ಮಾಡುತ್ತಿದ್ದರು. ಬಳಿಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತೇವೆ ಎಂದು ಹೆದರಿಸಿ ಹಣ ವಸೂಲಿ ಮಾಡುತ್ತಿದ್ದರು. ಈ ಗುಂಪಿಗೆ ಇತ್ತೀಚೆಗೆ ಸಬರಿರಾಜನ್ ಮತ್ತು ವಸಂತ್‍ಕುಮಾರ್ ಸೇರಿಕೊಂಡಿದ್ದರು.

ಆರೋಪಿ ಯುವಕರು ಮಹಿಳೆಯರ ಹೆಸರಿನಲ್ಲಿ ನಕಲಿ ಫೇಸ್‍ಬುಕ್ ಅಕೌಂಟ್ ತೆರೆದು, ಹುಡುಗಿಯರ ಜೊತೆಗೆ ಸ್ನೇಹ ಬೆಳೆಸುತ್ತಿದ್ದರು. ಬಳಿಕ ಸ್ನೇಹಿತರಂತೆ ಚಾಟ್ ಮಾಡುತ್ತಾ ಅವರೊಂದಿಗೆ ಬೆರೆಯುತ್ತಿದ್ದರು. ಚಾಟಿಂಗ್ ವೇಳೆ ಸೆಕ್ಸ್, ಲೆಸ್ಬಿನ್ (ಸಲಿಂಗಕಾಮ) ಸಂಬಂಧಿಸಿದ ವಿಚಾರವಾಗಿ ಮಾತನಾಡುತ್ತಿದ್ದರು. ಹೀಗೆ ಹುಡುಗಿಯರನ್ನು ನಂಬಿಸಿ, ಭೇಟಿಯಾಗುವಂತೆ ಒತ್ತಾಯಿಸುತ್ತಿದ್ದರು. ಅಷ್ಟೇ ಅಲ್ಲದೆ ಭೇಟಿಯಾದ ಯುವತಿಯರನ್ನು ಹೋಟೆಲ್ ಅಣ್ಣಾ ಮಲೈ ಅರಣ್ಯ ಪ್ರದೇಶದ ತೋಟದ ಮನೆಗೆ ಕೆರೆದುಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡುತ್ತಿದ್ದರು.

ಚೆನ್ನೈ, ಕೊಯಮತ್ತೂರು, ಸೇಲಂ ಮತ್ತು ತಮಿಳುನಾಡಿನ ಅನೇಕ ಭಾಗದ ಯುವತಿಯರು, ಮಹಿಳೆಯರು ಯುವಕರ ಮೋಸಕ್ಕೆ ಒಳಗಾಗಿದ್ದಾರೆ. ಅವರಲ್ಲಿ ಹೆಚ್ಚಾಗಿ ಶಾಲೆ ಮತ್ತು ಕಾಲೇಜು ಶಿಕ್ಷಕಿಯರು, ವೈದ್ಯರು, ಹೈಸ್ಕೂಲ್ ಹಾಗೂ ಕಾಲೇಜು ವಿದ್ಯಾರ್ಥಿನಿಯರಿದ್ದಾರೆ. ಯುವಕರ ಮೋಸಕ್ಕೆ ಒಳಗಾದ ಅನೇಕ ಯುವತಿಯರು ಕುಟುಂಬದ ಮರ್ಯಾದೆಗೆ ಅಂಜಿ ದೂರು ನೀಡಲು ಹಿಂದೇಟು ಹಾಕಿದ್ದಾರೆ. ಆರೋಪಿಗಳಿಂದ ಕಿರುಕುಳಕ್ಕೆ ಒಳಗಾಗಿದ್ದ ಮಹಿಳೆಯರಲ್ಲಿ ನಾಲ್ವರು ಅನೌಪಚಾರಿಕವಾಗಿ ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಯುವಕರ ವಿರುದ್ಧ ಠಾಣೆಯೊಂದರಲ್ಲಿ ದೂರು ದಾಖಲಾಗಿತ್ತು. ಈ ದೂರಿನ ಅನ್ವಯ ಆರೋಪಿಗಳ ಪೈಕಿ ಓರ್ವ ಯುವಕ 19 ವರ್ಷದ ಯುವತಿಯ ಜೊತೆಗೆ ಫೇಸ್‍ಬುಕ್‍ನಲ್ಲಿ ಸ್ನೇಹ ಬೆಳೆಸಿ ಆತ್ಮೀಯವಾಗಿ ನಡೆದುಕೊಂಡಿದ್ದ. ಬಳಿಕ ನಿನ್ನನ್ನು ಭೇಟಿಯಾಗಬೇಕು ಎಂದು ಕೇಳಿದ್ದನು. ಹೀಗಾಗಿ ಯುವತಿ ಫೆಬ್ರವರಿ 12ರಂದು ಕಾಲೇಜಿನ ಊಟದ ವಿರಾಮದ ವೇಳೆ ಭೇಟಿಯಾಗುವುದಾಗಿ ತಿಳಿಸಿದ್ದಳು. ಅಂದುಕೊಂಡಂತೆ ಅಂದು ಯುವತಿ ಬಂದಿದ್ದಳು, ಬಳಿಕ ಯುವತಿಯನ್ನು ಕಾರಿನಲ್ಲಿ ಕೂರಿಸಿಕೊಂಡು ಮಾತನಾಡುತ್ತಿದ್ದ. ಈ ವೇಳೆ ಅಲ್ಲಿಗೆ ಬಂದ ಆತನ ಮೂವರು ಸ್ನೇಹಿತರು ಕಾರಿನಲ್ಲಿ ಕುಳಿತು ಚಾಲನೆ ಮಾಡಲು ಆರಂಭಿಸಿದರು. ಇತ್ತ ಭೇಟಿಯಾಗಲು ಕರೆದಿದ್ದ ಯುವಕ ಲೈಂಗಿಕ ಕಿರುಕುಳ ಕೊಡುತ್ತಿದ್ದ. ಈ ದೃಶ್ಯವನ್ನು ಇತರರು ವಿಡಿಯೋ ಮಾಡಿಕೊಳ್ಳುತ್ತಿದ್ದರು. ಬಳಿಕ ವಿಡಿಯೋ ಮೂಲಕ ಬೆದರಿಕೆ ಹಾಕಿ ಯುವತಿಯನ್ನು ಭೇಟಿಯಾಗುವಂತೆ ಹಾಗೂ ಹಣ ನೀಡುವಂತೆ ಒತ್ತಾಯಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆಯ ಕುರಿತು ಯುವತಿ ತನ್ನ ಪೋಷಕರ ಮುಂದೆ ಹೇಳಿಕೊಂಡಿದ್ದಳು. ವಿಡಿಯೋವನ್ನು ಡಿಲೀಟ್ ಮಾಡುವಂತೆ ಯುವತಿಯ ಸಹೋದರ ಆರೋಪಿಗಳಿಗೆ ಕೇಳಿಕೊಂಡಿದ್ದಾನೆ. ಆದರೆ ಇದಕ್ಕೆ ಒಪ್ಪದ ಆರೋಪಿಗಳು ಆತನಿಗೆ ಬೆದರಿಕೆ ಹಾಕಿದ್ದರು. ಬಳಿಕ ಈ ಸಂಬಂಧ ಯುವತಿಯ ಪೋಷಕರು ಸಮೀಪದ ಪೊಲೀಸ್ ಠಾಣೆಗೆ ದೂರು ನೀಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಈ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಎ. ನಾಗರಾಜ್ ಎಐಎಡಿಎಂಕೆ ಮಂತ್ರಿ ಜೊತೆ ತೆಗೆಸಿಕೊಂಡಿದ್ದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದರಿಂದ ಎಚ್ಚೆತ್ತುಕೊಂಡ ಪಕ್ಷದ ನಾಯಕರು ನಾಗರಾಜ್‍ನನ್ನು ಪಕ್ಷದ ಸದಸ್ಯತ್ವದಿಂದ ಕಿತ್ತುಹಾಕಿದ್ದಾರೆ. ಅಲ್ಲದೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಎಐಎಡಿಎಂಕೆ ನಾಯಕರು ಹಾಗೂ ಇತರೆ ರಾಜಕಾರಣಿಗಳು ಆಕ್ರೋಶ ಹೊರಹಾಕಿದ್ದಾರೆ.

ಸದ್ಯ ನಾಲ್ವರು ಆರೋಪಿಗಳ ಮೇಲೆ ಐಪಿಸಿ ಸೆಕ್ಷನ್ 354(ಎ) ಹಾಗೂ 354(ಬಿ), ಸೆಕ್ಷನ್ 66 ಮಾಹಿತಿ ತಂತ್ರತ್ಞಾನ ಕಾಯ್ದೆ 2000 ಮತ್ತು ಸೆಕ್ಷನ್ 4ರ ತಮಿಳುನಾಡು ಮಾಹಿಳಾ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಈ ಪ್ರಕರಣ ಚುನಾವಣೆ ವೇಳೆ ಸರ್ಕಾರದ ಮೇಲೆ ಪರಿಣಾಮ ಬೀಳಬಹುದಾದ ಸಾಧ್ಯತೆ ಹೆಚ್ಚಿದ್ದು, ಈ ಪ್ರಕರಣವನ್ನು ಸಿಐಡಿ ಅಥವಾ ಸಿಬಿಗೆ ತನಿಖೆಗೆ ನೀಡಲಾಗುವುದು ಎಂಬ ಮಾಹಿತಿ ಲಭ್ಯವಾಗಿರುವುದಾಗಿ ರಾಷ್ಟ್ರೀಯ ಪತ್ರಿಕೆಯೊಂದು ವರದಿ ಮಾಡಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *