ಮೋದಿ, ರಾಹುಲ್ ಗಾಂಧಿ ಧ್ವನಿಯಲ್ಲಿ ಜಗಳವಿದೆ, ರಕ್ತಪಾತವಿದೆ: ಸಾಣೇಹಳ್ಳಿ ಸ್ವಾಮೀಜಿ

– ದೇಶಪ್ರೇಮವು ಅಪಾಯದ ಸ್ಥಿತಿಯಲ್ಲಿದೆ

ಧಾರವಾಡ: ಪ್ರಧಾನಿ ನರೇಂದ್ರ ಮೋದಿ ಮತ್ತು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಧ್ವನಿಯಲ್ಲಿ ಜಗಳವಿದೆ. ಹೊಡೆದಾಟ, ರಕ್ತಪಾತವಿದೆ ಎಂದು ಸಾಣೇಹಳ್ಳಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

ನಗರದಲ್ಲಿ ನಡೆದ ರಾಷ್ಟ್ರೀಯ ರಂಗೋತ್ಸವದ ನಾಟಕ ಉದ್ಘಾಟನೆಯಲ್ಲಿ ಮಾತನಾಡಿದ ಸ್ವಾಮೀಜಿ, ಭಿನ್ನ ಧ್ವನಿಗಳು ಸಾಂಗತ್ಯವಾದಾಗ ಒಳ್ಳೆಯ ನಾಟಕವಾಗುತ್ತದೆ. ಒಂದು ವೇಳೆ ಧ್ವನಿ ಕರ್ಕಶವಾಗಿದ್ದರೆ ನಾಟಕ ನೋಡುಗರ ಮೆಚ್ಚುಗೆ ಪಡೆಯಲ್ಲ. ಹಾಗೆಯೇ ನಮ್ಮ ನಾಡಿಯಲ್ಲಿಯೂ ಕೆಲವು ಧ್ವನಿಗಳಿವೆ. ಪ್ರಧಾನಿ ನರೇಂದ್ರ ಮೋದಿ ಅವರದ್ದು ಒಂದು ರೀತಿಯ ಧ್ವನಿ. ಅವರನ್ನು ವಿರೋಧಿಸುವ ರಾಹುಲ್ ಗಾಂಧಿ ಧ್ವನಿಯೇ ಮತ್ತೊಂದು ರೀತಿಯಿದೆ ಎಂದು ಹೇಳಿದರು.

ಪ್ರಧಾನಿ ಮೋದಿ ಹಾಗೂ ರಾಹುಲ್ ಗಾಂಧಿ ಧ್ವನಿಯಲ್ಲಿ ಜಗಳ, ಹೊಡೆದಾಟವಿದ್ದರೆ ಅದರ ವಿರುದ್ಧದ ಧ್ವನಿ ನಾಟಕದಲ್ಲಿದೆ. ನಾಟಕವು ಸಮಾಜವನ್ನು ಜಾಗೃತಿಗೊಳಿಸುತ್ತದೆ. ಸಾಮಾಜಿಕ ಪ್ರಜ್ಞೆ ಬೆಳೆಸುತ್ತದೆ, ಮಾನವೀಯ ಮೌಲ್ಯಗಳನ್ನು ತಿಳಿಸುತ್ತದೆ ಎಂದು ತಿಳಿಸಿದರು.

ದೇಶ ದೊಡ್ಡದು. ಆದರೆ ಅದಕ್ಕಿಂತ ದೊಡ್ಡದು ದೇವರು. ದೇವರ ಮೇಲಿನ ನಂಬಿಕೆಯನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ದೇವರು ಅಂದ್ರೆ ಕೇವಲ ಮೂರ್ತಿಯಲ್ಲ, ನಮ್ಮೊಳಗೆ ಇರುವ ಅರಿವು. ಅದನ್ನು ಅರಿತು ಬಿಟ್ಟರೇ ದೇವರ ಜೊತೆಗೆ ದೇಶವೇ ದೊಡ್ಡದಾಗುತ್ತದೆ. ದೇಶಪ್ರೇಮ ಇಂದು ಅಪಾಯದ ಸ್ಥಿತಿಯಲ್ಲಿದೆ ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಯಾವ ಸಂಘ ಸಂಸ್ಥೆಗಳಿಗೆ ಅನುದಾನ ನೀಡಬೇಕೆಂದು ಪಟ್ಟಿ ಸಿದ್ಧಪಡಿಸಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ನೀಡಿತ್ತು. ಆದರೆ ಇದರಲ್ಲಿ ಕೆಲವು ಬೋಗಸ್ ಸಂಘ-ಸಂಸ್ಥೆಗಳಿವೆ ಎಂದು ಆರೋಪಿಸಿದ ಸಚಿವರು ಸಹಿ ಮಾಡದೇ ಪಟ್ಟಿಯನ್ನು ವಾಪಸ್ ಕಳುಹಿಸಿದ್ದಾರೆ. ಒಂದು ವೇಳೆ ಬೋಗಸ್ ಸಂಘ-ಸಂಸ್ಥೆಗಳಿದ್ದರೆ, ಅಂತಹವುಗಳ ಬಿಲ್‍ಗಳಿಗೆ ಸಹಿ ಮಾಡದೇ ಕಪ್ಪು ಪಟ್ಟಿಗೆ ಸೇರಿಸಬೇಕು. ಅದನ್ನು ಬಿಟ್ಟು ಎಲ್ಲ ಸಂಘ ಸಂಸ್ಥೆಗಳ ಅನುದಾನ ತಡೆಹಿಡಿದಿದ್ದು ಸರಿಯಲ್ಲ ಎಂದು ಶ್ರೀಗಳು ನುಡಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *