ಮದ್ವೆಯಾಗಿ ಮಕ್ಕಳಿದ್ರೂ ಲವ್ – ಪ್ರಿಯಕರನ ಸಹಾಯದಿಂದ ಪೋಷಕರನ್ನೇ ಕೊಂದು ಸೂಟ್‍ಕೇಸಿಗೆ ತುಂಬಿದ್ಳು

ನವದೆಹಲಿ: 26 ವರ್ಷದ ಯುವತಿಯೊಬ್ಬಳು ತನ್ನ ಪ್ರಿಯಕರನ ಸಹಾಯದಿಂದ ತನ್ನ ಪೋಷಕರನ್ನೇ ಕೊಲೆ ಮಾಡಿದ್ದಾಳೆ. ಬಳಿಕ ಮೃತದೇಹವನ್ನು ಸೂಟ್‍ಕೇಸ್‍ನಲ್ಲಿ ತುಂಬಿ ಚರಂಡಿಯಲ್ಲಿ ಎಸೆದಿರುವ ಅಮಾನವೀಯ ಘಟನೆ ಪಶ್ಚಿಮ ದೆಹಲಿಯ ಪಾಸ್ಟಿಮ್ ವಿಹಾರದಲ್ಲಿ ನಡೆದಿದೆ.

ಮೃತರನ್ನು ಜಗೀರ್ ಕೌರ್(43) ಮತ್ತು ಅವರ ಪತಿ ಗುರ್ಮೆತ್ ಎಂದು ಗುರುತಿಸಲಾಗಿದೆ. ನಂಗ್ಲೋಯ್ ಸಯೆದ್ ಗ್ರಾಮದ ಬಳಿ ಚರಂಡಿಯಲ್ಲಿ ಸೂಟ್‍ಕೇಸ್ ಹರಿದು ಬಂದಿದೆ. ಅದನ್ನು ತೆಗೆದು ಪೊಲೀಸರು ನೋಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.

ಆರೋಪಿಗಳನ್ನು ದಾವೀಂದರ್ ಕೌರ್ ಮತ್ತು ಅವಳ ಗೆಳೆಯ ಪ್ರಿನ್ಸ್ ದೀಕ್ಷಿತ್ ಎಂದು ಗುರುತಿಸಲಾಗಿದೆ. ಸದ್ಯಕ್ಕೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿ ನಮ್ಮ ತಂದೆ-ತಾಯಿ ನಾಪತ್ತೆಯಾಗಿದ್ದಾಗ ನಾನು ದೆಹಲಿಯಲ್ಲಿ ಇರಲಿಲ್ಲ ಎಂದು ಹೇಳಿದ್ದಾಳೆ. ಆದರೆ ಆಕೆಯ ಫೋನ್ ಪರಿಶೀಲನೆ ಮಾಡಿದಾಗ ಆಕೆ ಸುಳ್ಳು ಹೇಳುತ್ತಿದ್ದಾಳೆ ಎಂದು ತಿಳಿಯಿತು. ನಂತರ ವಿಚಾರಣೆ ಮಾಡಿದಾಗ ಪ್ರಿಯಕರ ಪ್ರಿನ್ಸ್ ದಿಕ್ಷೀತ್ ಸಹಾಯದಿಂದ ಪೋಷಕರನ್ನೂ ನಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ ಎಂದು ಡಿಸಿಪಿ ಸೆಜು ಕುರುವಿಲ್ಲಾ ಹೇಳಿದ್ದಾರೆ.

ಏನಿದು ಪ್ರಕರಣ?
ಆರೋಪಿಗೆ ದಾವೀಂದರ್ ಕೌರ್ ಮದುವೆಯಾಗಿ ಇಬ್ಬರು ಮಕ್ಕಳಿದ್ದರು. ಆದರೆ ಒಂದು ವರ್ಷದ ಹಿಂದೆ ಪತಿಯನ್ನು ಬಿಟ್ಟು ಪಾಸ್ಟಿಮ್ ವಿಹಾರದಲ್ಲಿದ್ದ ತನ್ನ ತವರಿಗೆ ಬಂದಿದ್ದಾಳೆ. ಕೆಲವು ದಿನಗಳ ನಂತರ ಆಕೆಗೆ ಪ್ರಿನ್ಸ್ ಪರಿಚಯವಾಗಿದೆ. ಪರಿಚಯ ಸ್ನೇಹವಾಗಿ ಇಬ್ಬರ ನಡುವೆ ಅನೈತಿಕ ಸಂಬಂಧ ಇತ್ತು. ಪ್ರಿನ್ಸ್ ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದನು ಎಂದು ತಿಳಿದು ಬಂದಿದೆ.

ಆರೋಪಿ ಕೌರ್ ತನ್ನ ತಂದೆ-ತಾಯಿಗೆ 50 ಲಕ್ಷದ ಫ್ಲಾಟ್ ಅನ್ನು ತನ್ನ ಹೆಸರಿಗೆ ಬರೆಯುವಂತೆ ಒತ್ತಾಯಿಸಿದ್ದಾಳೆ. ಆದರೆ ಪೋಷಕರು ಇದಕ್ಕೆ ಒಪ್ಪಲಿಲ್ಲ. ಇದರಿಂದ ಕೋಪಗೊಂಡ ಆರೋಪಿ ಪೋಷಕರನ್ನೇ ಕೊಲೆ ಮಾಡಲು ಪ್ಲಾನ್ ಮಾಡಿದ್ದಾಳೆ. ಅದರಂತೆಯೇ ತಾಯಿಯೂ ಪಂಜಾಬ್‍ಗೆ ಹೋಗಿದ್ದರು. ಇದೇ ಒಳ್ಳೆಯ ಸಮಯ ಎಂದುಕೊಂಡು ತಂದೆಗೆ ನಿದ್ರೆ ಮಾತ್ರೆ ಕೊಟ್ಟಿದ್ದಾಳೆ. ಬಳಿಕ ಉಸಿರುಗಟ್ಟಿಸಿ ಕೊಂದಿದ್ದಾಳೆ. ಮರುದಿನ ತಾಯಿ ಮನೆಗೆ ಬಂದಿದ್ದಾರೆ. ಅವರಿಗೂ ನಿದ್ರೆ ಮಾತ್ರೆ ಕೊಟ್ಟು ಕೊಲೆ ಮಾಡಿದ್ದಾಳೆ. ಬಳಿಕ ಇಬ್ಬರ ಮೃತದೇಹವನ್ನು ಸೂಟ್‍ಕೇಸಿನಲ್ಲಿ ತುಂಬಿ ಚರಂಡಿಗೆ ಎಸೆದಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾಳೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಸದ್ಯಕ್ಕೆ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹಗಳನ್ನು ಸಾಗಿಸಲು ಸಹಾಯ ಮಾಡಿದ್ದ ಇಬ್ಬರು ಆರೋಪಿಗಳಿಗಾಗಿ ಹುಡುಕಾಡುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *