ಇಂದು ಸಂಜೆ ಪ್ರಕಟವಾಗಲಿದೆ ಚುನಾವಣಾ ದಿನಾಂಕ: ಏನಿದು ನೀತಿ ಸಂಹಿತೆ?

ನವದೆಹಲಿ: ಕೇಂದ್ರ ಚುನಾವಣಾ ಆಯೋಗ ಲೋಕಸಭಾ ದಿನಾಂಕವನ್ನು ಇಂದು ಪ್ರಕಟಿಸುವ ಸಾಧ್ಯತೆಯಿದೆ. ಸಂಜೆ 5 ಗಂಟೆಗೆ ಆಯೋಗ ಸುದ್ದಿಗೋಷ್ಠಿಯನ್ನು ಕರೆದಿದ್ದು ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗುವ ಸಾಧ್ಯತೆಯಿದೆ.

ಲೋಕಸಭೆ ಚುನಾವಣೆ ಜೊತೆಗೆ ಚುನಾವಣಾ ಆಯೋಗ ಒಡಿಶಾ, ಆಂಧ್ರ ಪ್ರದೇಶ, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶ ವಿಧಾನಸಭಾ ಕ್ಷೇತ್ರಗಳಿಗೆ ಸಹ ಚುನಾವಣೆ ನಡೆಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

2014ರ ಚುನಾವಣೆಯ ಸಮಯದಲ್ಲಿ ಮಾರ್ಚ್ 5 ರಂದು ಚುನಾವಣಾ ವೇಳಾಪಟ್ಟಿಯನ್ನು ಘೋಷಿಸಿತ್ತು. 9 ಹಂತದಲ್ಲಿ ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಚುನಾವಣಾ ಪ್ರಕ್ರಿಯೆ ನಡೆದಿತ್ತು. ಮೊದಲ ಹಂತದ ಮತದಾನ ಏಪ್ರಿಲ್ 7 ರಂದು ನಡೆದಿದ್ದರೆ, ಕೊನೆಯ ಹಂತದ ಚುನಾವಣೆ ಮೇ 12 ರಂದು ನಡೆದಿತ್ತು.  ಮೇ 16 ರಂದು ಫಲಿತಾಂಶ ಪ್ರಕಟವಾಗಿತ್ತು.

 

ಏನಿದು ನೀತಿ ಸಂಹಿತೆ?
ಚುನಾವಣಾ ಸಮಯದಲ್ಲಿ ಆಯೋಗ ರಾಜಕೀಯ ಪಕ್ಷಗಳಿಗೆ ಮತ್ತು ಮತದಾರರಿಗೆ ನಡತೆ ಸಂಹಿತೆಯನ್ನು ನೀಡಿ ಕೆಲವು ಮಾರ್ಗಸೂಚಿಯನ್ನು ಕೊಡುತ್ತದೆ. ಈ ನೀತಿ ಸಂಹಿತೆಯನ್ನು ಜನಪ್ರತಿನಿಧಿಗಳು ಉಲ್ಲಂಘಿಸುವಂತಿಲ್ಲ. ನೀತಿ ಸಂಹಿತೆಯನ್ನು ಉಲ್ಲಂಘಿಸಿದರೆ ಅವರ ವಿರುದ್ಧ ಪ್ರಕರಣ ದಾಖಲಿಸಬಹುದು.

ನೀತಿ ಸಂಹಿತೆ ಜಾರಿಯಾದ ಬಳಿಕ ಹಾಲಿ ಸರ್ಕಾರ ಯಾವುದೇ ಯೋಜನೆಗಳನ್ನು ಪ್ರಕಟಿಸುವಂತಿಲ್ಲ. ಜನಪ್ರತಿನಿಧಿಗಳು ಸರ್ಕಾರದ ಕಾರ್ಯಕ್ರಮದಲ್ಲಿ ಭಾಗವಹಿಸುವಂತಿಲ್ಲ. ತುರ್ತು ಸಂದರ್ಭ ಹೊರತು ಪಡಿಸಿ ಸರ್ಕಾರದ ಅಧಿಕಾರಿಗಳು ನಡೆಸುವ ಸಭೆಗಳಲ್ಲಿ ಭಾಗವಹಿಸುವಂತಿಲ್ಲ. ಜನ ಸಾಮಾನ್ಯರು ಭಾರೀ ಪ್ರಮಾಣದ ಹಣವನ್ನು ತೆಗೆದುಕೊಂಡು ಹೀಗುವಾಗ ಅದಕ್ಕೆ ದಾಖಲೆಗಳನ್ನು ಇಟ್ಟುಕೊಳ್ಳುವುದು ಕಡ್ಡಾಯ. ದಾಖಲೆ ಇಲ್ಲದೇ ಇದ್ದರೆ ಹಣವನ್ನು ವಶಕ್ಕೆ ಪಡೆಯಲಾಗುತ್ತದೆ.

ಸರ್ಕಾರಿ ಅಧಿಕಾರಿಗಳು ರಾಜಕೀಯ ನಾಯಕರ ಜೊತೆ ಗುರುತಿಸಿಕೊಳ್ಳುವಂತಿಲ್ಲ. ತನ್ನ ಪರವಾಗಿ ಕೆಲಸ ಮಾಡುವ ಅಧಿಕಾರಿಯನ್ನು ತನ್ನ ಕ್ಷೇತ್ರಕ್ಕೆ ವರ್ಗಾವಣೆ ಮಾಡುವಂತಿಲ್ಲ. ತುರ್ತು, ಅನಿವಾರ್ಯ ಸಂದರ್ಭದಲ್ಲಿ ಆಯೋಗದ ಅನುಮತಿ ಪಡೆದು ಅಧಿಕಾರಿಯನ್ನು ವರ್ಗಾವಣೆ ಮಾಡಬಹುದು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Comments

Leave a Reply

Your email address will not be published. Required fields are marked *