ನನ್ನ ಬಳಿಯೂ ಅಸ್ತ್ರಗಳಿದ್ದು, ಸಮಯ ಬಂದಾಗ ಪ್ರಯೋಗಿಸ್ತೀನಿ: ಉಮೇಶ್ ಜಾಧವ್

ಕಲಬುರಗಿ: ನನ್ನ ಬಳಿ ಕೂಡ ಅಸ್ತ್ರಗಳಿವೆ ಸಮಯ ಬಂದಾಗ ಪ್ರಯೋಗಿಸ್ತೇನೆ ಎಂದು ಶಾಸಕ ಉಮೇಶ್ ಜಾಧವ್ ಅವರು ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಕಾಂಗ್ರೆಸ್ ಹಿರಿಯ ಮುಖಂಡ ಖರ್ಗೆ ಸೋಲಿಸಲು ಸಿದ್ದರಾಮಯ್ಯನವರೇ ಜಾಧವ್ ಛೂ ಬಿಟ್ಟಿದ್ದಾರೆಂಬ ವಿಚಾರದ ಕುರಿತು ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕುತಂತ್ರ ರಾಜಕಾರಣ ಮಾಡುವ ಜಾಯಮಾನದವರಲ್ಲ ಎಂದು ತಿರುಗೇಟು ನೀಡಿದ್ದಾರೆ.

ನನ್ನನ್ನು ‘ಅಮಿಶ್’ ಜಾಧವ್ ಎಂದು ಹೋದ ಕಡೆಯಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ದಾಳಿ ಮಾಡಲು ಬಂದಾಗ ನಾನೇನೂ ಕೈಕಟ್ಟಿ ಕುಳಿತುಕೊಳ್ಳಬೇಕಾ? ಸಮಯ ಸಂದರ್ಭ ನೋಡಿ ಅಸ್ತ್ರಗಳನ್ನು ಬಿಡುತ್ತೇನೆ ಎಂದು ಕಿಡಿಕಾರಿದ್ದಾರೆ.

ಪ್ರಧಾನಿ ಮೋದಿ ಸೌಜನ್ಯಕ್ಕಾದರೂ ಜಾಧವ್ ಹೆಸರು ಪ್ರಸ್ತಾಪಿಸಿಲ್ಲಂಬ ಪ್ರೀಯಾಂಕ್ ಖರ್ಗೆ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಇತ್ತೀಚೆಗೆ ಕಲಬುರಗಿಗೆ ಭೇಟಿ ನೀಡಿದಾಗ ಪ್ರಧಾನಿ ಅವರು ನನಗೆ ತುಂಬಾ ಗೌರವ ಕೊಟ್ಟಿದ್ದಾರೆ. ಅಷ್ಟಕ್ಕೂ ಪ್ರಧಾನಿ ಮೋದಿ ನನಗೆ ಎಷ್ಟು ಗೌರವ ನೀಡಿದ್ದಾರೆ ಎಂದು ನಿಮಗೇನು ಗೊತ್ತು. ಅದೆಲ್ಲ ನಿಮಗೆ ಬಾಯಿಬಿಟ್ಟು ಹೇಳಬೇಕೇ ಎಂದು ಪ್ರಶ್ನಿಸಿದರು.

ಜಾಧವ್‍ರಂತಹ ನೂರು ಜನರನ್ನ ಸೃಷ್ಟಿಸುತ್ತೆವೆಂದು ಸಚಿವ ಪ್ರಿಯಾಂಕ್ ಹೇಳಿದ್ದು, ಸೃಷ್ಟಿ ಮಾಡೋದು ಮೇಲಿರುವ ಸೃಷ್ಟಿಕರ್ತ. ಹಾಗೊಂದು ವೇಳೆ ಸೃಷ್ಟಿ ಮಾಡ್ತೀನಿ ಅಂದರೆ ದೇವರು ಒಳ್ಳೆಯದು ಮಾಡಲಿ. ಲೋಕಸಭೆ ಚುನಾವಣೆ ಅಖಾಡದಲ್ಲಿ ಫೈಟ್ ಮಾಡೋಕೆ ಸನ್ನದ್ಧನಾಗಿದ್ದೇನೆ ಅಂದ್ರು. ಇದನ್ನೂ ಓದಿ: ನಾನು ತೆಗೆದುಕೊಳ್ಳಲಿರೋ ನಿರ್ಧಾರ ಮೈಲಿಗಲ್ಲಾಗಬೇಕು: ಸ್ಪೀಕರ್ ರಮೇಶ್ ಕುಮಾರ್

ಜಾಧವ್ ಬಿಜೆಪಿಗೆ ಸೇಲ್ ಎಂಬ ಆರೋಪ ಸಂಬಂಧ ಜಗತ್ತಿನ ಯಾವುದೇ ತನಿಖಾ ಏಜೆನ್ಸಿಯಿಂದ ಈ ಬಗ್ಗೆ ವಿಚಾರಣೆ ಮಾಡಲಿ. ಬಾಯಿಗೆ ಬಂದಂತೆ ಮಾತಾಡೋದು ಸರಿಯಲ್ಲ ಎಂದು ಪ್ರಿಯಾಂಕ್ ಖರ್ಗೆಗೆ ಎಚ್ಚರಿಕೆ ನೀಡಿದ ಅವರು, ಹಣ ಪಡೆದಿಲ್ಲ ಎಂದು ಯಾವುದೇ ದೇವಸ್ಥಾನದಲ್ಲೂ ಆಣೆ ಮಾಡೋಕೆ ರೆಡಿ ಎಂದರು.

ರಾಜೀನಾಮೆ ಅಂಗೀಕಾರ ಆಗದೇ ಇರುವ ವಿಚಾರದ ಕುರಿತು ಇದೇ ವೇಳೆ ಪ್ರತಿಕ್ರಿಯಿಸಿದ ಅವರು, ಕಾನೂನಿನ ಪ್ರಕಾರ ನನ್ನ ರಾಜೀನಾಮೆ ಅಂಗೀಕಾರವಾಗುತ್ತದೆ. ಬೆಂಗಳೂರಿನಿಂದ ದೆಹಲಿವರೆಗೆ ಈ ಬಗ್ಗೆ ಎಲ್ಲರನ್ನ ಕೇಳಿದ್ದೀನಿ. ಸ್ಪೀಕರ್ ರಮೇಶ್ ಕುಮಾರ್ ಯಾರ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಗೊತ್ತಿದೆ. ರಾಜೀನಾಮೆ ಅಂಗೀಕಾರ ಬಗ್ಗೆ ಸ್ಪಷ್ಟನೆ ಪಡೆಯುತ್ತಿದ್ದಾರೆ. ಮಾರ್ಚ್ 12 ರಂದು ವಿಚಾರಣೆಗೆ ಹಾಜರಾಗುತ್ತೆನೆ. ನನ್ನ ರಾಜೀನಾಮೆ ಅಂಗೀಕರವಾಗುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Comments

Leave a Reply

Your email address will not be published. Required fields are marked *