ದರ್ಶನ್ ಇರುವಾಗ ಅಲ್ಲಿ ನಾನ್ಯಾಕೆ- ಸುಮಲತಾ ರಾಜಕೀಯ ಎಂಟ್ರಿ ಬಗ್ಗೆ ಕಿಚ್ಚ ಸುದೀಪ್ ಪ್ರತಿಕ್ರಿಯೆ

ಬೆಂಗಳೂರು: ಲೋಕಸಭಾ ಚುನಾವಣೆಗೆ ನಟಿ ಸುಮಲತಾ ಅಂಬರೀಶ್ ಅವರು ಸ್ಪರ್ಧಿಸಲು ರಾಜಕೀಯಕ್ಕೆ ಎಂಟ್ರಿ ಕೊಟ್ಟ ವಿಷಯದ ಬಗ್ಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪ್ರತಿಕ್ರಿಯಿಸಿದ್ದಾರೆ.

ದರ್ಶನ್ ಇರುವಾಗ ಅಲ್ಲಿ ನಾನ್ಯಾಕೆ?. ಕ್ಯಾಂಪೆನ್ ವಿಚಾರವಾಗಿ ನನಗೆ ಇನ್ನೂ ಬುಲಾವ್ ಬಂದಿಲ್ಲ. ಬುಲಾವ್ ಬಂದರೆ ನಿಮಗೆ ಮೊದಲು ಹೇಳುತ್ತೇನೆ. ಸದ್ಯ ನಾನು ಈಗ ರಾಜಕೀಯದಿಂದ ತುಂಬಾ ದೂರ ಇದ್ದೇನೆ. ಅಲ್ಲದೆ ಸಾಕಷ್ಟು ನಿರ್ಮಾಪಕರು ನನ್ನ ನಂಬಿ ಹಣ ಹಾಕಿದ್ದಾರೆ. ಹಾಗಾಗಿ ಸಿನಿಮಾದಲ್ಲಿ ಬ್ಯುಸಿ ಆಗಿದ್ದೇನೆ. ಸುಮಲತಾ ಅವರಲ್ಲೇ ಅಂಬರೀಶ್ ಎಂಬ ಹೆಸರು ಇದೆ. ಅಂಬರೀಶ್ ಒಂದು ದೊಡ್ಡ ಹೆಸರು. ಸುಮಲತಾ ಅವರಿಗೆ ಆ ಹೆಸರೇ ಸಾಕು. ಅಲ್ಲದೆ ದರ್ಶನ್ ಅವರು ಕೂಡ ಸುಮಲತಾ ಅವರ ಜೊತೆ ಇದ್ದಾರೆ. ರಾಜಕೀಯದಲ್ಲಿ ನನ್ನ ಒಲವು ಕಡಿಮೆ ಇದೆ ಎಂದು ಸುದೀಪ್ ತಿಳಿಸಿದ್ದಾರೆ.

ಮಂಡ್ಯದ ಮಳವಳ್ಳಿಯಲ್ಲಿ ದರ್ಶನ್ ಬೆಂಬಲ ನೀಡುವ ವಿಚಾರದ ಬಗ್ಗೆ ಮಾತನಾಡಿದ ಸುಮಲತಾ ಅವರು, ದರ್ಶನ್ ಹಾಗೂ ಯಶ್ ನನ್ನ ಮನೆ ಮಕ್ಕಳು. ದರ್ಶನ್ ನನ್ನ ದೊಡ್ಡ ಮಗ ಇದ್ದಂತೆ. ನಾನೇನೇ ಕೇಳಿದರೂ ದರ್ಶನ್ ನನ್ನ ಜೊತೆ ಇರುತ್ತಾರೆ. ಅಭಿಷೇಕ್ ನಿಂದ ನಿರೀಕ್ಷೆ ಮಾಡುವ ಎರಡರಷ್ಟು ನನ್ನಿಂದ ನಿರೀಕ್ಷೆ ಮಾಡಿ ಎಂದು ದರ್ಶನ್ ಹೇಳುತ್ತಾರೆ. ದರ್ಶನ್ ನನ್ನ ಪರ ನಿಲ್ಲುತ್ತಾರೆ ಎನ್ನುವ ನಂಬಿಕೆ ನನಗೆ ಇದೆ ಎಂದರು.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಈ ಬಗ್ಗೆ ನಗರದ ಖಾಸಗಿ ಹೋಟೆಲಿನಲ್ಲಿ ನಡೆದ ‘ಯಜಮಾನ’ ಚಿತ್ರದ ಸಕ್ಸಸ್ ಪ್ರೆಸ್‍ಮೀಟ್ ನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದರು. ಅಂಬರೀಶ್ ಅವರು ಚುನಾವಣೆಗೆ ನಿಂತಾಗಲೂ ಪ್ರಚಾರಕ್ಕೆ ಹೋಗಿದ್ದೇನೆ. ಈಗಲೂ ಹೋಗುತ್ತೇನೆ. ಸುಮಲತಾ ಪರ ಪ್ರಚಾರ ಮಾಡುವುದು ನನ್ನ ಕರ್ತವ್ಯ ಎಂದು ಹೇಳಿದ್ದಾರೆ. ಅಲ್ಲದೆ ಸುಮಲತಾ ಅಂಬರೀಶ್ ಚುನಾವಣೆಯಲ್ಲಿ ಸ್ಪರ್ಧಿಸಿ, ಚುನಾವಣಾ ಪ್ರಚಾರಕ್ಕೆ ಕರೆದರೆ ನಾನು ಹೋಗುತ್ತೇನೆ. ಚುನಾವಣೆಯಲ್ಲಿ ಸ್ಪರ್ಧಿಸಿದ ಸ್ನೇಹಿತರು ಯಾರೇ ಕರೆದರೂ ಪ್ರಚಾರಕ್ಕೆ ಹೋಗುತ್ತೇನೆ ಎಂದು  ತಿಳಿಸಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *