ಬಂಡೀಪುರ ಕಾಡ್ಗಿಚ್ಚು- ಗಮನಿಸಿ, ವೈರಲ್ ಆಗ್ತಿದೆ ಫೇಕ್ ಚಿತ್ರಗಳು

ಚಾಮರಾಜನಗರ: ಬಂಡೀಪುರದಲ್ಲಿ ಕಾಣಿಸಿಕೊಂಡಿರುವ ಕಾಡ್ಗಿಚ್ಚಿನಲ್ಲಿ ಸುಮಾರು 2,500 ಹೆಕ್ಟೇರ್ ಪ್ರದೇಶ ಸುಟ್ಟು ಹೋಗಿದ್ದು, ಸಾಕಷ್ಟು ವನ್ಯಜೀವಿಗಳು ಮೃತಪಟ್ಟಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಫೋಟೋಗಳು ಹರಿದಾಡುತ್ತಿವೆ.

ಕೊಲಂಬಿಯಾ, ಸ್ಪೇನ್, ಕ್ಯಾಲಿಫೋರ್ನಿಯಾ, ಇಂಡೊನೇಷ್ಯಾ ಹೀಗೇ ಹಲವೆಡೆ ಅರಣ್ಯ ಪ್ರದೇಶಗಳಲ್ಲಿ ಕಾಣಿಸಿಕೊಂಡಿದ್ದ ಕಾಡ್ಗಿಚ್ಚಿಗೆ ಬಲಿಯಾದ ಪ್ರಾಣಿಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಇದೇ ಬಂಡೀಪುರ ಅರಣ್ಯದ ಕಾಡ್ಗಿಚ್ಚಿಗೆ ಸಾವನ್ನಪ್ಪಿದ ವನ್ಯಜೀವಿಗಳು ಅಂತ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಅರಣ್ಯ ರಕ್ಷಣೆಯ ಪ್ರಧಾನ ಅಧಿಕಾರಿ ಪುನ್ನತಿ ಶ್ರೀಧರ್ ಅವರು, ಬಂಡೀಪುರದಲ್ಲಿ ಕಾಡ್ಗಿಚ್ಚನ್ನು ನಿಯಂತ್ರಣಕ್ಕೆ ತರುವ ಪ್ರಯತ್ನ ನಡೆಯುತ್ತಿದೆ. ಇಲ್ಲಿಯವರೆಗೆ ಯಾವುದೇ ಪ್ರಾಣಿಗಳು ಮೃತದೇಹ ಪತ್ತೆಯಾಗಿಲ್ಲ. ಬೆಂಕಿ ಕಾವು ತಗುಲುತ್ತಿದ್ದಂತೆ ಪ್ರಾಣಿಗಳೆಲ್ಲಾ ಬೇರೆಡೆಗೆ ಹೋಗುತ್ತವೆ. ಸುಮ್ಮನೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ವಾಯುವ್ಯ ಕೊಲಂಬಿಯಾದ ನೆಕೊಕ್ಲಿ ಅರಣ್ಯ ಪ್ರದೇಶದಲ್ಲಿ ಕಾಣಿಕೊಂಡಿದ್ದ ಕಾಡ್ಗಿಚ್ಚಿನಲ್ಲಿ ಸುಟ್ಟು ಕರಕಲಾದ ಹಾವಿನ ಚಿತ್ರ ಈದಾಗಿದ್ದು, 2015ರ ಏಪ್ರೀಲ್ 15ರಂದು ಈ ಚಿತ್ರ ಕೊಲಂಬಿಯಾದ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು.

ಬೆಂಕಿಗೆ ಪ್ರಾಣಬಿಟ್ಟ ಈ ಮೊಲದ ಫೋಟೋವನ್ನು ಜುಮಾ ಪ್ರೆಸ್‍ನ ಕ್ರಿಸ್ ರುಸಾನೊಸ್ಕಿ 2018ರಲ್ಲಿ ಕ್ಲಿಕ್ಕಿಸಿದ್ದರು. ಅಲ್ಲದೆ ಈ ಚಿತ್ರವು 2018ರ ನವೆಂಬರ್ 8ರಂದು ಕ್ಯಾಲಿಫೋರ್ನಿಯಾದ ಮಲ್ಲಿಬುಲ್ಲಿ ಅರಣ್ಯ ಪ್ರದೇಶದಲ್ಲಿ ಉಂಟಾದ ಕಾಡ್ಗಿಚ್ಚಿಗೆ ಪ್ರಾಣಬಿಟ್ಟ ಮೊಲದ ಫೋಟೋವಾಗಿದೆ.

ಮೃತ ಒರಂಗುಟಾವ್ ಚಿತ್ರವು 2016ರ ಫೆಬ್ರವರಿಯಲ್ಲಿ ಕ್ಲಿಕ್ಕಿಸಲಾಗಿದ್ದು, ಸೆಂಟರ್ ಆಫ್ ಒರಂಗುಟಾವ್ ಪ್ರೋಟೆಕ್ಷನ್ ಸಂಸ್ಥೆಯೂ ಈ ಫೋಟೋವನ್ನು ಪತ್ರಿಕೆಯೊಂದರಲ್ಲಿ ಪ್ರಕಟಿಸಿತ್ತು.

ಕೊನೆಗಿರುವ ಈ ಚಿತ್ರವು ಸ್ಪೇನ್- ಫ್ರಾನ್ಸ್ ಗಡಿಯಲ್ಲಿರುವ ಡಾರ್ನಿಯಸ್‍ನಲ್ಲಿ ಕಾಣಿಸಿಕೊಂಡಿದ್ದ ಕಾಡ್ಗಿಚ್ಚಿನಲ್ಲಿ ಪ್ರಾಣಬಿಟ್ಟ ಕಾಡುಕುರಿಗಳ ಫೋಟೋವಾಗಿದೆ. ಈ ಫೋಟೋವನ್ನು ಸುದ್ದಿಸಂಸ್ಥೆಯೊಂದರ ಛಾಯಾಗ್ರಾಹಕ ಲೂಯಿಸ್ ಜೆನೆ ಕ್ಲಿಕ್ಕಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *